ADVERTISEMENT

ಜಮೀನು ಕಬಳಿಕೆ ಆರೋಪ: ಶ್ರೀರಾಮುಲು ವಜಾಕ್ಕೆ ಉಗ್ರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:58 IST
Last Updated 7 ಅಕ್ಟೋಬರ್ 2022, 15:58 IST
ಉಗ್ರಪ್ಪ
ಉಗ್ರಪ್ಪ   

ಬೆಂಗಳೂರು: ತುಂಗ ಭದ್ರಾ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಕಬಳಿಸಿರುವ ಆರೋಪ ಎದುರಿಸುತ್ತಿರುವ ಸಚಿವ ಬಿ. ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀರಾಮುಲು ಅವರು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರೊಂದಿಗೆ ಶಾಮೀಲಾಗಿ 27 ಎಕರೆ 5 ಗುಂಟೆ ಸರ್ಕಾರಿ ಜಮೀನು ಕಬಳಿಸಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ. ನ್ಯಾಯಾಲಯಕ್ಕೆ ಆರೋಪಪಟ್ಟಿಯೂ ಸಲ್ಲಿಕೆಯಾಗಿದೆ. ಬಿಜೆಪಿ ನಾಯಕರಿಗೆ ನೈತಿಕತೆ ಇದ್ದರೆ ರಾಮುಲು ಅವರನ್ನು ಸಂಪುಟದಿಂದ ಕೈಬಿಡಲಿ’ ಎಂದರು.

‌ಒಟ್ಟು ₹ 300 ಕೋಟಿ ಮೌಲ್ಯದ ಜಮೀನನ್ನು ಕಬಳಿಸಲಾಗಿದೆ. ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ. ಶಿವಪ್ಪ ಸೇರಿದಂತೆ 11 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ಶ್ರೀರಾಮುಲು ಸಚಿವ ಸ್ಥಾನದಲ್ಲಿ ಮುಂದುವರಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಕಾರಣದಿಂದ ಅವರ ರಾಜೀನಾಮೆ ಪ‍ಡೆಯಬೇಕು. ಆರೋಪಿಗಳ ಜಾಮೀನು ರದ್ಧತಿಗೆ ಲೋಕಾಯುಕ್ತ ಪೊಲೀಸರು ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.