ADVERTISEMENT

ಸಂಪುಟ ವಿಸ್ತರಣೆಗಿಂತ ಕೋವಿಡ್‌ ನಿಯಂತ್ರಣಕ್ಕೆ ಆದ್ಯತೆ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 7:50 IST
Last Updated 24 ಜನವರಿ 2022, 7:50 IST
   

ಮೈಸೂರು: ಸಚಿವ ಸಂಪುಟದ ವಿಸ್ತರಣೆಗಿಂತ ಈಗ ಕೋವಿಡ್‌ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ರಾಜ್ಯದಲ್ಲಿ ನಿತ್ಯವೂ ಕೋವಿಡ್ ಹೆಚ್ಚುತ್ತಿದೆ. ಸರ್ಕಾರದ ಮೊದಲ ಆದ್ಯತೆ ಇದರ ನಿಯಂತ್ರಣ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಹೈಕಮಾಂಡ್‌ಗೆ ಬಿಡಲಾಗಿದೆ ಎಂದು ಸೋಮವಾರ ಇಲ್ಲಿ ಅವರು ಸುದ್ದಿಗಾರರಿಗೆ ಹೇಳಿದರು.

‘ಕೆಲವು ಶಾಸಕರು ವೈಯಕ್ತಿಕವಾಗಿ ಕುಳಿತು ಮಾತನಾಡುವುದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಬಾರದು. ಕೆಲವರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕುಳಿತು ಮಾತನಾಡುವ ಅಭ್ಯಾಸವಿರುತ್ತದೆ. ಅದು ಅವರ ವೈಯಕ್ತಿಕ ವಿಚಾರ. ನನಗೆ ಅಂತ ಯಾವ ಅಭ್ಯಾಸಗಳೂ ಇಲ್ಲ ಅಂತಹ ತರಬೇತಿಯೂ ಇಲ್ಲ’ ಎಂದು ತಿಳಿಸಿದರು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 6 ತಿಂಗಳು ಪೂರೈಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಅಭದ್ರತೆ ಇಲ್ಲ‌. ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ. ಅದರ ಬಗ್ಗೆ ಯಾರಿಗೂ ಯೋಚನೆ ಬೇಡ ಎಂದು ಹೇಳಿದರು.

ಸಿದ್ದರಾಮಯ್ಯ ಕಾಲದಲ್ಲಿ ಎಡವಟ್ಟು

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಸತಿ ಇಲಾಖೆಯಲ್ಲಿ ಮಾಡಿದ್ದ ಯಡವಟ್ಟುಗಳನ್ನು ಈಗ ಸರಿಪಡಿಸಲಾಗಿದ್ದು, ಮನೆ ವಿತರಣೆ ಆರಂಭವಾಗಲಿದೆ ಎಂದು ಹೇಳಿದರು.

ಸುಮ್ಮನೆ ಒಂದು ಮನೆ ಕೊಟ್ಟಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ, ಮನೆ ಕೊಡಲು ಅವರು ಬಿಟ್ಟಿಲ್ಲ. ಅವರು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿದ್ದೇವೆ. ಕೇಂದ್ರದ ಆ್ಯಪ್‌ನಲ್ಲಿ ದತ್ತಾಂಶಗಳನ್ನು ಫೀಡ್ ಮಾಡುವ ಬದಲು ರಾಜ್ಯಸರ್ಕಾರವೇ ಪ್ರತ್ಯೇಕ ಆ್ಯಪ್ ರೂಪಿಸಿ ದತ್ತಾಂಶ ತುಂಬಿ ಗೊಂದಲ ಸೃಷ್ಟಿಸಿತ್ತು. ಮಾತು ಮನೆ ಕೆಡಿಸಿತು ಎನ್ನುವ ಮಾತಿನಂತೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಅವರಿಗೆ ಈ ಗೊಂದಲದ ಕುರಿತು ಮಾಹಿತಿ ಇಲ್ಲ. ನಾನಾಗಿರುವುದಕ್ಕೆ ಈಗ ಈ ಅಡೆ ತಡೆಗಳನ್ನು ಬಗೆಹರಿಸಿದ್ದೇನೆ’ ಎಂದರು.

‘ದೇವರಾಣೆ, ನಮ್ಮ ಅಪ್ಪರಾಣೆ ಹೇಳುತ್ತಿದ್ದೇನೆ ಮೇಕೆದಾಟು ಯೋಜನೆಯನ್ನು ಮಾಡುವುದು ನಾವೇ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನಗಳು ಬೇಡ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.