ನವದೆಹಲಿ: ಮಂಗನ ಕಾಯಿಲೆಗೆ (ಕೆಎಫ್‌ಡಿ) ಲಸಿಕೆ ಹಾಗೂ ಇತರ ವಿಷಯಗಳ ಕುರಿತು ಐಸಿಎಂಆರ್ ಮಹಾ ನಿರ್ದೇಶಕ ರಾಜೀವ್ ಬಹ್ಲ್ ಅವರೊಂದಿಗೆ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಇಲ್ಲಿ ಸಮಾಲೋಚನೆ ನಡೆಸಿದರು.
‘ಕೆಎಫ್‌ಡಿ ಲಸಿಕೆಯು ಮೊದಲ ಹಂತದಲ್ಲಿ ಭರವಸೆಯ ಫಲಿತಾಂಶ ನೀಡಿದೆ. ಮಂಗಗಳ ಮೇಲಿನ ಪ್ರಾಯೋಗಿಕ ಬಳಕೆ ಎರಡನೇ ಹಂತದಲ್ಲಿದೆ. ಮಾನವರ ಮೇಲೆ ಈ ಲಸಿಕೆಯ ಪ್ರಯೋಗ 2025ರ ಏಪ್ರಿಲ್‌ನಲ್ಲಿ ನಡೆಯಲಿದೆ. 2026ಕ್ಕೆ ಲಸಿಕೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡಬೇಕು’ ಎಂದು ರಾಜೀವ್ ಬಹ್ಲ್ ಕೋರಿದರು.
ರಾಜ್ಯ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಡೆಂಗಿ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಐಸಿಎಂಆರ್‌ಗೆ ಸಚಿವರು ಮಾಹಿತಿ ನೀಡಿದರು. ಈ ಮಾದರಿಯನ್ನು ಇತರ ರಾಜ್ಯಗಳಲ್ಲಿ ಜಾರಿ ಮಾಡಲು ಐಸಿಎಂಆರ್ ಅಧಿಕಾರಿಗಳು ಉತ್ಸುಕತೆ ತೋರಿದರು ಎಂದು ಸಚಿವರು ತಿಳಿಸಿದರು.
ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ಜತೆಗೂಡಿ ಕೆಲಸ ಮಾಡಲು ರಾಜ್ಯ ಸರ್ಕಾರ ಹಾಗೂ ಐಸಿಎಂಆರ್ ಒಪ್ಪಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.