ADVERTISEMENT

ದಿನೇಶ್‌ ಅಮಿನ್‌‍ಮಟ್ಟು ಸಂಪಾ‌ದಿಸಿರುವ ‘ಬೇರೆಯೇ ಮಾತು’ ಕೃತಿ ಬಿಡುಗಡೆ

‘ಪತ್ರಿಕೋದ್ಯಮದ ನೀತಿ ಪಾಠ ಹೇಳುವ ಪುಸ್ತಕ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 13:29 IST
Last Updated 16 ಏಪ್ರಿಲ್ 2022, 13:29 IST
ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ (ಎಡದಿಂದ ಎರಡನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ದಿನೇಶ್‌ ಅಮಿನ್‌ಮಟ್ಟು, ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮತ್ತು ಲೇಖಕ ಕೆ.ಪುಟ್ಟಸ್ವಾಮಿ ಇದ್ದರು -ಪ್ರಜಾವಾಣಿ ಚಿತ್ರ
ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ (ಎಡದಿಂದ ಎರಡನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ದಿನೇಶ್‌ ಅಮಿನ್‌ಮಟ್ಟು, ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮತ್ತು ಲೇಖಕ ಕೆ.ಪುಟ್ಟಸ್ವಾಮಿ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಡ್ಡರ್ಸೆ ರಘುರಾಮ ಶೆಟ್ಟರು ವಸ್ತುನಿಷ್ಠ ದೃಷ್ಟಿಕೋನದ ಬರಹಗಾರ. ಈ ಪುಸ್ತಕದಲ್ಲಿರುವ ಪ್ರತಿಯೊಂದು ಲೇಖನವೂ ಓದುಗರಿಗೆ ಬೇರೆಯದೇ ಮಾತಾಗಿ ಕೇಳಿಸುತ್ತವೆ. ಪತ್ರಿಕೋದ್ಯಮ ಯಾವ ದಿಸೆಯಲ್ಲಿ ಸಾಗಬೇಕು ಎಂಬುದನ್ನೂ ಸೂಚಿಸುತ್ತವೆ’ ಎಂದು ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

ದಿನೇಶ್‌ ಅಮಿನ್‌‍ಮಟ್ಟು ಸಂಪಾ‌ದಿಸಿರುವ, ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳನ್ನು ಒಳಗೊಂಡ ‘ಬೇರೆಯೇ ಮಾತು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

‘ಇದು ಪತ್ರಿಕೋದ್ಯಮದ ನೀತಿ ಪಾಠ ಹೇಳುವ ಕೃತಿ. ಇದರಲ್ಲಿರುವ ಎಲ್ಲಾ ಲೇಖನಗಳಲ್ಲೂ ಪತ್ರಿಕೋದ್ಯಮದ ಘನತೆ ಹಾಗೂ ಗೌರವ ಉಳಿಸುವ ಭಾಷೆ ವ್ಯಕ್ತವಾಗಿದೆ’ ಎಂದರು.

ADVERTISEMENT

‘ರಾಜ್ಯದೊಳಗೆ ಕನ್ನಡ ಪ್ರಥಮ ಭಾಷೆಯಾಗಬೇಕು ಎಂದು ಸರ್ಕಾರವು ಹಿಂದೊಮ್ಮೆ ಆದೇಶ ಹೊರಡಿಸಿತ್ತು. ಅದನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಅದರ ವಿರುದ್ಧವಾಗಿ ವಡ್ಡರ್ಸೆಯವರು ‌ಬರೆದಿದ್ದ ‘ಜನವಿರೋಧಿ ತೀರ್ಪು’ ಎಂಬ ಲೇಖನ ಪುಸ್ತಕದ 82ನೇ ಪುಟದಲ್ಲಿದೆ. ಇದರಲ್ಲಿ ಅವರು ಪ್ರಾದೇಶಿಕ ಭಾಷೆಗಳ ಅಸ್ಮಿತೆ ಬಗ್ಗೆ ತರ್ಕಶುದ್ಧವಾಗಿ ಬರೆದಿದ್ದಾರೆ’ ಎಂದು ಹೇಳಿದರು.

‘ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಪುಸ್ತಕದಲ್ಲಿರುವ ಲೇಖನಗಳು ಅಧ್ಯಾಯಹಾರ ರೂಪದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುತ್ತವೆ. ಪತ್ರಿಕೋದ್ಯಮಿಗಳು ವಿವೇಕ, ಸಾಮಾಜಿಕ ಹೊಣೆಗಾರಿಕೆ ಹಾಗೂಬಹುತ್ವ ಭಾರತದ ಸಾಮಾಜಿಕ ಸಂರಚನೆಯೊಳಗೆ ಎಲ್ಲವನ್ನೂ ವಿಶ್ಲೇಷಿಸಬೇಕು ಎಂಬುದನ್ನೂ ಲೇಖನಗಳು ಪ್ರತಿಪಾದಿಸುತ್ತವೆ’ ಎಂದು ವಿವರಿಸಿದರು.

ಸಾಹಿತಿಕೆ.ಮರುಳಸಿದ್ದಪ್ಪ, ‘ರಘುರಾಮ ಶೆಟ್ಟರುಓದುಗರೊಂದಿಗೆ ಸಂವಾದ ನಡೆಸಿದ್ದ ವಿಶೇಷ ಲೇಖನಗಳನ್ನು ಪ್ರತ್ಯೇಕವಾಗಿ ಪುಸ್ತಕದಲ್ಲಿ ನೀಡಲಾಗಿದೆ. ಜಾತಿವಾದದ ಕುರಿತು ಅವರು ಲೇಖನಗಳ ಮೂಲಕ ಧ್ವನಿ ಎತ್ತಿದ್ದರು. ವ್ಯಕ್ತಿ ಪ್ರಧಾನ ವ್ಯವಸ್ಥೆಯೇ ಭಷ್ಟಾಚಾರದ ಮೂಲ ಎಂಬುದನ್ನು ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.ರಾಜಕಾರಣ ಮತ್ತು ಚುನಾವಣೆ ಭ್ರಷ್ಟಾಚಾರದ ಮೂಲಗಳು ಎಂಬುದನ್ನೂ ಲೇಖನಗಳ ಮೂಲಕ ಪ್ರತಿಪಾದಿಸಿದ್ದಾರೆ’ ಎಂದು ಹೇಳಿದರು.

ಪತ್ರಕರ್ತ ದಿನೇಶ ಅಮಿನ್‌ಮಟ್ಟು, ‘ಪತ್ರಿಕೆಯಲ್ಲಿ ಪ್ರಕಟವಾಗಿದ್ದ ರಘುರಾಮ ಶೆಟ್ಟರ ಅಂಕಣ ಹಾಗೂ ಬರಹಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೆ. ಸಮಯ ಸಿಕ್ಕಾಗಲೆಲ್ಲಾ ಅವುಗಳನ್ನು ಓದುತ್ತಿದೆ. ಅಕ್ಷತಾ ಹುಂಚದಕಟ್ಟೆಯವರ ಒತ್ತಾಸೆಯ ಮೇರೆಗೆ ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತ‌ರಲಾಗಿದೆ’ ಎಂದರು.

‘ಮುಂಗಾರು ಪತ್ರಿಕೆಯಲ್ಲಿ ಮುಕ್ತವಾಗಿ ಬರೆಯುವ ಅವಕಾಶ ಸಿಕ್ಕಿತ್ತು. ಕೆ.ಎನ್‌.ಶಾಂತಕುಮಾರ್‌ ಅವರು ‘ಪ್ರಜಾವಾಣಿ’ಯ ಸಂಪಾದಕರಾಗಿರದೆ ಹೋಗಿದ್ದರೆ ಅಂಕಣಗಳನ್ನು ಬರೆಯಲು ಆಗುತ್ತಿರಲಿಲ್ಲ’ ಎಂದು ಭಾವುಕರಾದರು.

ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಕೆ.ಎನ್.ಶಾಂತಕುಮಾರ್, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಇದ್ದರು.

‘ಸಮಾನತೆಯ ಜಲಕ್ಕಾಗಿ ಕಾಯುತ್ತಿರುವ ನೆಲ’

‘ಸಹನೆ, ಪ್ರೀತಿ, ನ್ಯಾಯ ಹಾಗೂ ಸಮಾನತೆಯ ಜಲಕ್ಕಾಗಿ ಭಾರತದ ನೆಲ ಚಾತಕ ಪಕ್ಷಿಯಂತೆ ಕಾಯುತ್ತಿದೆ’ ಎಂದು ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

‘ಚಾತುರ್ವರ್ಣ ಗುಂಪಿನ ಹಿಂದೂ ಪ್ರತಿಪಾದಕ ಗೋಲ್ವಾಲ್ಕರ್‌ ಹಾಗೂ ಹಿಂಸಾ ಪ್ರವೃತ್ತಿಯ ನಾಥುರಾಮ್‌ ಗೋಡ್ಸೆ ಅವರ ಕುಮೌಲ್ಯಗಳನ್ನು ಭಾರತದೆಲ್ಲೆಡೆ ಬಿತ್ತಲು ಆರ್‌ಎಸ್‌ಎಸ್‌ ಅವಿರತವಾಗಿ ಶ್ರಮಿಸುತ್ತಿದೆ. ದೇಶದಲ್ಲೆಲ್ಲಾ ಗೋಡ್ಸೆ ಮತ್ತು ಗೋಲ್ವಾಲ್ಕರ್‌ ಅವರನ್ನು ತುಂಬಲು ಸ್ಥಳಾವಕಾಶ ಹುಡುಕುತ್ತಿರುವ ಆರ್‌ಎಸ್‌ಎಸ್‌, ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ನಿರ್ನಾಮ ಮಾಡಲು ಹವಣಿಸುತ್ತಿದೆ’ ಎಂದು ದೂರಿದರು.

‘ಲವ್‌ ಜಿಹಾದ್‌’ ಬಗ್ಗೆ ಪ್ರಸ್ತಾಪಿಸಿ,‘ಲವ್‌ ಎಂದರೆ ಪ್ರೀತಿ. ಜಿಹಾದ್‌ ಎಂದರೆ ಧರ್ಮಯುದ್ಧ. ನಿಜವಾದ ಪ್ರೀತಿಯು ಧರ್ಮವನ್ನೂ ಮೀರಿದುದು. ಪ್ರೀತಿ ಮತ್ತು ಯುದ್ಧ ಅಜಗಜಾಂತರ ಕ್ರಿಯೆಗಳು. ಇತ್ತೀಚೆಗೆ ‘ಲವ್‌ ಕೇಸರಿ’ ರಂಗಪ್ರವೇಶ ಮಾಡಿದೆ. ಕೇಸರಿ ಎಂದರೆ ವಿರಕ್ತಿ. ಈ ಪ್ರೀತಿ ಮತ್ತು ವಿರಕ್ತಿ ಹೇಗೆ ಕೂಡುತ್ತವೆ. ವಿರಕ್ತಿ ಹೊಂದಿರುವವರನ್ನು ಪ್ರೀತಿ ಮಾಡಿದವರ ಪಾಡೇನು?’ ಎಂದು ವ್ಯಂಗ್ಯವಾಡಿದರು.

‘ರಘುರಾಮ ಶೆಟ್ಟರು ಪ್ರಸ್ತುತ ಸಮಾಜದಲ್ಲಿ ಕಣ್ಮರೆಯಾಗುತ್ತಿರುವ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು’ ಎಂದರು.

ಪುಸ್ತಕ ಪರಿಚಯ

ಪುಸ್ತಕದ ಹೆಸರು: ಬೇರೆಯೇ ಮಾತು

ಸಂಪಾದನೆ: ದಿನೇಶ್‌ ಅಮಿನ್‌ಮಟ್ಟು

ಪುಟಗಳ ಸಂಖ್ಯೆ: 408

ದರ: ₹380

ಪ್ರಕಾಶಕರು: ಅಹರ್ನಿಶಿ ಪ್ರಕಾಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.