ಮೈಸೂರು: ಅರಮನೆ ಆವರಣದ ಕರಿಕಲ್ಲು ತೊಟ್ಟಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸಾಂಪ್ರದಾಯಿಕ ವಜ್ರಮುಷ್ಟಿ ಕಾಳಗ ಸಭಿಕರನ್ನು ರೋಮಾಂಚನಗೊಳಿಸಿತು.
ವಿಜಯದಶಮಿಯ ದಿನದಂದು ಯದುವಂಶದ ಅರಸರು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ, ಅರಮನೆ ಅಂಗಳದಲ್ಲಿ ‘ವಜ್ರನಖ’ ಎಂಬ ಆಯುಧ ಧರಿಸಿದ ಜಟ್ಟಿಗಳು ಸೆಣಸಾಡುವುದು ಸಂಪ್ರದಾಯ. ಜಟ್ಟಿಯ ತಲೆಯಿಂದ ರಕ್ತ ಬರುವವರೆಗೂ ಕಾಳಗ ನಡೆಯುತ್ತದೆ.
ಈ ಬಾರಿ ಮೈಸೂರಿನ ಬಲರಾಮ ಜಟ್ಟಿ– ಚನ್ನಪಟ್ಟಣದ ನರಸಿಂಹ ಜಟ್ಟಿ ಹಾಗೂ ಬೆಂಗಳೂರಿನ ನಾರಾಯಣ ಜಟ್ಟಿ–ಚಾಮರಾಜನಗರದ ಗಿರೀಶ್ ಜಟ್ಟಿ ನಡುವೆ ಪೈಪೋಟಿ ನಡೆಯಿತು.
ಬೆಳಿಗ್ಗೆ 10.15ಕ್ಕೆ ಎರಡೂ ಜೋಡಿಗಳು ಅಖಾಡಕ್ಕೆ ಇಳಿದವು. ಕೇಶಮುಂಡನ ಮಾಡಿಸಿಕೊಂಡಿದ್ದ ಇವರು, ಇಡೀ ದೇಹಕ್ಕೆ ಕೆಂಪು ಮಣ್ಣು ಬಳಿದುಕೊಂಡಿದ್ದರು. ಆರಂಭದಲ್ಲಿ ಅಖಾಡಕ್ಕೆ ಒಂದು ಸುತ್ತು ಸುತ್ತಿ ಪೂಜೆ ಸಲ್ಲಿಸಿದರು.
10.20ರ ವೇಳೆಗೆ ಕಾದಾಟ ಶುರುವಾಯಿತು. ಮೈಸೂರಿನ ಬಲರಾಮ ತಮ್ಮ ಎದುರಾಳಿ ನರಸಿಂಹ ಅವರ ಮೇಲೆ ಮಿಂಚಿನಂತೆ ಎರಗಿದರು. ತಲೆಯ ಹಿಂಭಾಗಕ್ಕೆ ವಜ್ರನಖದಿಂದ ಹೊಡೆದು ರಕ್ತ ಒಸರುವಂತೆ ಮಾಡಿದರು. ಕೇವಲ 20 ಸೆಕೆಂಡ್‌ಗಳಲ್ಲಿ ಕಾದಾಟ ಕೊನೆಗೊಂಡಿತು.
ನಾರಾಯಣ ಜಟ್ಟಿ ಮತ್ತು ಗಿರೀಶ್ ಜಟ್ಟಿ ನಡುವೆ ಕೂಡ ರೋಚಕ ಪೈಪೋಟಿ ನಡೆಯಿತು. ಒಂದು ಹಂತದಲ್ಲಿ ಕೆಳಕ್ಕೆ ಬಿದ್ದ ಗಿರೀಶ್ ಜಟ್ಟಿಗೆ ವಜ್ರನಖದಿಂದ ಹೊಡೆಯಲು ನಾರಾಯಣ ಜಟ್ಟಿ ಮುಂದಾದರು. ಆದರೆ ಇದಕ್ಕೆ ‘ದಶಮಂದಿ’ಗಳು ಅವಕಾಶ ನೀಡಲಿಲ್ಲ. ನಿಗದಿತ ಸಮಯ ಕೊನೆಗೊಂಡದ್ದರಿಂದ ಈ ಕಾದಾಟ ನಿಲ್ಲಿಸಲಾಯಿತು.
ಟೈಗರ್ ಬಾಲಾಜಿ ಜಟ್ಟಿ ಮತ್ತು ಶ್ರೀನಿವಾಸ ಜಟ್ಟಿ ‘ದಶಮಂದಿ’ಗಳಾಗಿ ಕಾರ್ಯನಿರ್ವಹಿಸಿದರು.
ವಜ್ರಮುಷ್ಟಿ ಕಾಳಗ ಕೊನೆಗೊಂಡ ಬಳಿಕ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಖಾಡದ ಬಳಿ ಬಂದರು. ಆ ಬಳಿಕ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು. ಯದುವೀರ ಪತ್ನಿ ತ್ರಿಷಿಕಾ ಕುಮಾರಿ ಕೂಡ ಕಾಳಗ ವೀಕ್ಷಿಸಿದರು.
ಕಳೆದ ಬಾರಿ ನಡೆದಿರಲಿಲ್ಲ: ಕಳೆದ ವರ್ಷ ವಿಜಯದಶಮಿಗೆ ಮುನ್ನ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ನಾದಿನಿ ವಿಶಾಲಾಕ್ಷಿ ದೇವಿ ನಿಧನರಾಗಿದ್ದರು. ಇದರಿಂದ ವಜ್ರಮುಷ್ಟಿ ಕಾಳಗ ಒಳಗೊಂಡಂತೆ ವಿಜಯದಶಮಿ ದಿನ ಅರಮನೆಯಲ್ಲಿ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.