ADVERTISEMENT

ಸಿದ್ದರಾಮಯ್ಯ ಸಿಬಿಐ ತನಿಖೆ ಎದುರಿಸಲಿ: ಪ್ರಹ್ಲಾದ ಜೋಶಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 13:39 IST
Last Updated 21 ಜುಲೈ 2024, 13:39 IST
<div class="paragraphs"><p>ಪ್ರಹ್ಲಾದ ಜೋಶಿ</p></div>

ಪ್ರಹ್ಲಾದ ಜೋಶಿ

   

ಬೆಳಗಾವಿ: ‘ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಭ್ರಷ್ಟಾಚಾರವಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪರಮಭ್ರಷ್ಟರಾಗಿ ಹೊರಹೊಮ್ಮಿದ್ದಾರೆ. ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲೂ ಅವರ ನೇರ ಹಸ್ತಕ್ಷೇಪ ಮತ್ತು ಆಶೀರ್ವಾದವಿದೆ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸಿಬಿಐ ತನಿಖೆ ಎದುರಿಸಬೇಕು’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‌ ಸುಳ್ಳು ಭರವಸೆ ನೀಡಿ, ಯಾವುದೇ ರೀತಿಯ ಮುಂದಾಲೋಚನೆ ಇಲ್ಲದೆ ‘ಗ್ಯಾರಂಟಿ’ ಯೋಜನೆ ಜಾರಿಗೊಳಿಸಿ ಪರದಾಡುತ್ತಿದೆ. ಹಿಂದಿನಿಂದಲೂ ಭ್ರಷ್ಟಾಚಾರದ ಲಕ್ಷಾಂತರ ಮೊಟ್ಟೆ ಇಟ್ಟು, ಅದಕ್ಕೆ ಕಾವು ಕೊಡುತ್ತ ಬಂದಿದೆ. ಪಂಡಿತ ನೆಹರು ಅವರ ಕಾಲದಿಂದಲೂ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹಗರಣ ನಡೆಯುತ್ತಲೇ ಬಂದಿವೆ’ ಎಂದು ದೂರಿದರು.

ADVERTISEMENT

‘ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರವಾಗಿ ಸಿದ್ದರಾಮಯ್ಯ ಬಾಲಿಶವಾದ ಹೇಳಿಕೆ ಕೊಡುತ್ತಿದ್ದಾರೆ. ಒಂದುವೇಳೆ ಅಧಿಕಾರಿಗಳೇ ಅಕ್ರಮ ಎಸಗಿದ್ದರೆ, ಸಚಿವರಾಗಿದ್ದ ಬಿ.ನಾಗೇಂದ್ರ ಅವರಿಂದ ರಾಜೀನಾಮೆ ಏಕೆ ಪಡೆದಿದ್ದೀರಿ? ನೀವು ತಪ್ಪೇ ಮಾಡಿರದಿದ್ದರೆ ಸಿಬಿಐ ತನಿಖೆಗೇಕೆ ಹೆದರುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಮಳೆಯಿಂದ ಹಾನಿಯಾದರೂ, ಸಂತ್ರಸ್ತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ಕೊಡುತ್ತಿಲ್ಲ. ಮನೆ ಬಿದ್ದರೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ₹5 ಲಕ್ಷ ಪರಿಹಾರ ಕೊಡುತ್ತಿತ್ತು. ಕಾಂಗ್ರೆಸ್‌ನವರು ಆ ಮೊತ್ತವನ್ನು ಈಗ ₹1 ಲಕ್ಷಕ್ಕೆ ಇಳಿಸಿದ್ದಾರೆ. ಮಳೆಯಿಂದ ಮನೆಗೆ ಹಾನಿಯಾದರೆ ನೀಡಲಾಗುತ್ತಿದ್ದ ಪರಿಹಾರವನ್ನು ಇಳಿಸಲಾಗಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.