ADVERTISEMENT

ವಾಲ್ಮೀಕಿ ನಿಗಮ: ನಾಗೇಶ್ವರಾವ್‌ಗೆ ಸೇರಿದ ಮನೆಯಿಂದ ₹1.49 ಕೋಟಿ ನಗದು ಜಪ್ತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:03 IST
Last Updated 16 ಜೂನ್ 2024, 16:03 IST
<div class="paragraphs"><p>ನಗದು ಹಣ</p></div>

ನಗದು ಹಣ

   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬಂಧಿತ ಆರೋಪಿ ನಾಗೇಶ್ವರಾವ್‌ಗೆ ಸೇರಿದ ಮನೆಯಿಂದ ₹1.49 ಕೋಟಿ ಜಪ್ತಿ ಮಾಡಿದ್ದಾರೆ.

ನಾಗೇಶ್ವರ ರಾವ್‌ ಅವರ ಜಕ್ಕೂರಿನ ನಿವಾಸದ ಮೇಲೆ ದಾಳಿ ನಡೆಸಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಹೈದರಾಬಾದ್‌ನ ಬ್ಯಾಂಕ್‌ನಿಂದ ಡ್ರಾ ಮಾಡಲಾಗಿತ್ತು. ಹಲವರ ಕೈಸೇರಿದ್ದ ಹಣವನ್ನು ಕೊನೆಗೆ ಜಕ್ಕೂರಿನ ಮನೆಯಲ್ಲಿ ಇಡಲಾಗಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ADVERTISEMENT

ಜೂನ್‌ 12ರಂದು ಮತ್ತೊಬ್ಬ ಆರೋಪಿ ಸತ್ಯನಾರಾಯಣ್ ವರ್ಮಾ ಎಂಬವರನ್ನು ಹೈದರಾಬಾದ್‌ನಲ್ಲಿ ಬಂಧಿಸಿದ್ದ ಎಸ್‌ಐಟಿ, ₹8.21 ಕೋಟಿ  ಜಪ್ತಿ ಮಾಡಿಕೊಂಡಿತ್ತು. ಜೂನ್‌ 30ರಂದು ನಿಗಮದ ಮಾಜಿ ವ್ಯವಸ್ಥಾಪಕನ ಆಪ್ತನ ಬಳಿಯಿಂದ ₹30 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿತ್ತು. ಇದುವರೆಗೂ ಈ ಪ್ರಕರಣದಲ್ಲಿ ₹13.62 ಕೋಟಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಎಂ.ಜಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ 18 ಖಾತೆಗಳಿಗೆ ₹94.73 ಕೋಟಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ.

ಈ ಅಕ್ರಮ ಹಣ ವರ್ಗಾವಣೆ ಸಂಬಂಧ ಈಗಾಗಲೇ ತನಿಖೆಗೆ ಇಳಿದಿರುವ ಎಸ್‌ಐಟಿ, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್‌, ಮಾಜಿ ಸಚಿವ ಬಿ.ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್‌ ನೆಕ್ಕುಂಟಿ, ನಾಗೇಶ್ವರ್‌ ರಾವ್‌, ಹೈದರಾಬಾದ್ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸತ್ಯನಾರಾಯಣ್‌ ಹಾಗೂ ಇವರ ಆಪ್ತ ಸತ್ಯನಾರಾಯಣ್ ವರ್ಮಾ ಎಂಬವರನ್ನು ಬಂಧಿಸಿದೆ. ಎಸ್‌ಐಟಿ ಅಧಿಕಾರಿಗಳು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.