ADVERTISEMENT

ವಾಲ್ಮೀಕಿ ನಿಗಮದ ಹಗರಣ: ಸಿಬಿಐಗೆ ಹೈಕೋರ್ಟ್ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 15:21 IST
Last Updated 23 ಜುಲೈ 2024, 15:21 IST
ಬಿಎಂಟಿಸಿಯಿಂದ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ: ಹೈಕೋರ್ಟ್ ನೋಟಿಸ್‌
ಬಿಎಂಟಿಸಿಯಿಂದ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ: ಹೈಕೋರ್ಟ್ ನೋಟಿಸ್‌   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಮೊತ್ತದ ಹಗರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಅಧಿಕಾರಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಬೆಳಿಗ್ಗೆ ವಿಚಾರಣೆ ನಡೆಸಿತು.

ಯೂನಿಯನ್ ಬ್ಯಾಂಕ್ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ‘ಯಾವುದೇ ಪ್ರಕರಣದಲ್ಲಿ ₹50 ಕೋಟಿಗಿಂತಲೂ ಹೆಚ್ಚಿನ ಮೊತ್ತದ ಹಗರಣ ಕಂಡುಬಂದರೆ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

ADVERTISEMENT

‘ರಾಜ್ಯ ಸರ್ಕಾರ ಇಂತಹ ಹಗರಣಗಳ ತನಿಖೆ ನಡೆಸಬಾರದು. ಬ್ಯಾಂಕ್ ಹಗರಣಗಳ ತನಿಖೆಗೆ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಇದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ–1949ರ ಅನುಸಾರ ಈ ಪ್ರಕರಣದ ತನಿಖೆಯನ್ನು ಬ್ಯಾಂಕ್‌ ಈಗಾಗಲೇ ಸಿಬಿಐ ವಶಕ್ಕೆ ನೀಡಿದೆ. ಹೀಗಾಗಿ, ಬ್ಯಾಂಕ್‌ ರಾಜ್ಯದ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ಸಾಧ್ಯವಿಲ್ಲ. ಆದ್ದರಿಂದ, ಇದನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿದರು.

ಕ್ಲುಪ್ತ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಸಿಬಿಐ ನಿರ್ದೇಶಕರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು. ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಸಿಬಿಐ ಪರ ಪಿ.ಪ್ರಸನ್ನಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.