ADVERTISEMENT

ವಾಲ್ಮೀಕಿ ನಿಗಮದ ಹಗರಣ: ನಾಗೇಂದ್ರ ವಿರುದ್ಧ ED ಪ್ರಾಸಿಕ್ಯೂಷನ್‌ ದೂರು

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಗಂಗಾ ಕಲ್ಯಾಣ ಯೋಜನೆ ನಿಧಿಗೂ ಕನ್ನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:32 IST
Last Updated 9 ಅಕ್ಟೋಬರ್ 2024, 23:32 IST
ಬಿ.ನಾಗೇಂದ್ರ 
ಬಿ.ನಾಗೇಂದ್ರ    

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಿಧಿ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಪ್ರಾಸಿಕ್ಯೂಷನ್‌ ದೂರು ಸಲ್ಲಿಸಿದೆ. ಅದರಲ್ಲಿ ಉಲ್ಲೇಖಿಸಿರುವ ವಿವಿಧ ಅಪರಾಧಿಕ ಕಲಂಗಳನ್ನು ಪರಿಗಣಿಸಿ ನ್ಯಾಯಾಲಯವು ದೂರನ್ನು ದಾಖಲಿಸಿಕೊಂಡಿದೆ.

‘ಶಾಸಕ ಬಿ.ನಾಗೇಂದ್ರ, ನಿಗಮದ ನಿಧಿ ಅಕ್ರಮ ವರ್ಗಾವಣೆ ಹಗರಣದ ಸಂಚುಕೋರ. ಅವರ ಆಣತಿಯಂತೆಯೇ ನಿಗಮದ ಹಣವನ್ನು ಅಕ್ರಮವಾಗಿ ಹೈದರಾಬಾದ್‌ನ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು’ ಎಂದು ಇ.ಡಿ ದೂರಿನಲ್ಲಿ ವಿವರಿಸಿದೆ.

‘ನಿಗಮವು ಬೇರೆ ಬ್ಯಾಂಕ್‌ ಖಾತೆಗಳಲ್ಲಿ ಹೊಂದಿದ್ದ ಠೇವಣಿಗಳನ್ನು ಅನಧಿಕೃತವಾಗಿ ಎಂ.ಜಿ.ರಸ್ತೆಯಲ್ಲಿನ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ₹43.33 ಕೋಟಿಯನ್ನು ಖಜಾನೆಯಿಂದ ಅಕ್ರಮವಾಗಿ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿದೆ.

ADVERTISEMENT

‘ಅಕ್ರಮವಾಗಿ ವರ್ಗಾವಣೆ ಮಾಡಲಾದ ₹89.62 ಕೋಟಿಯಲ್ಲಿ, ₹20.19 ಕೋಟಿಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂಬುದಕ್ಕೆ ನಾಗೇಂದ್ರ ಅವರ ಆಪ್ತ ವಿಜಯ್‌ಕುಮಾರ್ ಗೌಡ ಅವರ ಮೊಬೈಲ್‌ನಲ್ಲಿ ಸಾಕ್ಷ್ಯಗಳು ಲಭ್ಯವಾಗಿವೆ’ ಎಂದು ವಿವರಿಸಿದೆ.

‘ಜತೆಗೆ ನಾಗೇಂದ್ರ ವೈಯಕ್ತಿಕ ಉದ್ದೇಶಕ್ಕೂ ಈ ಹಣ ಬಳಸಿಕೊಂಡಿದ್ದಾರೆ. ಹಗರಣ ಪತ್ತೆಯಾಗುತ್ತಿದ್ದಂತೆಯೇ ಈ ದಾಖಲೆಗಳಿದ್ದ ಮೊಬೈಲ್‌ಗಳನ್ನು ಅವರು ನಾಶ ಮಾಡಿದ್ದಾರೆ. ಜತೆಗೆ ಸಂಚಿನಲ್ಲಿ ಭಾಗಿಯಾಗಿದ್ದ ಎಲ್ಲರಿಗೂ, ಈ ಬಗ್ಗೆ ಬಾಯಿಬಿಡದಂತೆ ಬೆದರಿಕೆ ಹಾಕಿದ್ದಾರೆ’ ಎಂದು ದೂರನಲ್ಲಿ ಆರೋಪಿಸಲಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರನ್‌ ಅವರು ಆತ್ಮಹತ್ಮೆ ಮಾಡಿಕೊಂಡ ಬಳಿಕ ಹಗರಣ ನಡೆದಿರುವುದು ಪತ್ತೆಯಾಗಿತ್ತು. ಆಗ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರ ವಿರುದ್ಧ ಆರೋಪ ಎದುರಾಗಿತ್ತು. ಪ್ರಕರಣದ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಪ್ರಕರಣದ ತನಿಖೆ ಚುರುಕುಗೊಂಡ ಬೆನ್ನಲ್ಲೇ, ಹಲವರನ್ನು ಎಸ್ಐಟಿ ಬಂಧಿಸಿತ್ತು.  ಆ ಬೆನ್ನಲ್ಲೇ, ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಸ್ಐಟಿ ತನಿಖೆ ನಡೆಸುತ್ತಿರುವ ಹೊತ್ತಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ತನಿಖೆ ಆರಂಭಿಸಿತ್ತು. ನಾಗೇಂದ್ರ ಅವರ  ವಿಚಾರಣೆ ನಡೆಸಿದ್ದ ಇ.ಡಿ. ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

25 ಸಂಚುಕೋರರು

‘ಬಿ.ನಾಗೇಂದ್ರ ಜತೆ ಇನ್ನೂ 24 ಮಂದಿ ಸಂಚು ರೂಪಿಸಿ ಹಗರಣ ಎಸಗಿದ್ದಾರೆ’ ಎಂದು ಇ.ಡಿ ದೂರಿನಲ್ಲಿ ಹೇಳಿದೆ. ಸತ್ಯನಾರಾಯಣ ವರ್ಮಾ ಏಕತಾರಿ ಸತ್ಯನಾರಾಯಣ ಜೆ.ಜಿ.ಪದ್ಮನಾಭ ನಾಗೇಶ್ವರ ರಾವ್‌ ನೆಕ್ಕಂಟಿ ನಾಗರಾಜ್‌ ವಿಜಯ್‌ ಕುಮಾರ್‌ ಗೌಡ ಜತೆಗೆ ಇನ್ನೂ 18 ಆರೋಪಿಗಳ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದೆ. ‘ಬೇರೆ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ತನಿಖೆ ಮುಂದುವರಿದಂತೆ ಮತ್ತಷ್ಟು ಮಂದಿಯನ್ನು ಬಂಧಿಸಲಾಗುವುದು’ ಎಂದು ಇ.ಡಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.