ADVERTISEMENT

ವಾಲ್ಮೀಕಿ ನಿಗಮ ಹಗರಣ | ನಾಗೇಂದ್ರ ಬಂಧನ ವಿಸ್ತರಣೆ: ಜೈಲು ಅಧಿಕಾರಿಗಳ ಕ್ಷಮೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:54 IST
Last Updated 14 ಆಗಸ್ಟ್ 2024, 15:54 IST
ಬಿ. ನಾಗೇಂದ್ರ
ಬಿ. ನಾಗೇಂದ್ರ   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಎರಡನೇ ಆರೋಪಿಯಾಗಿರುವ ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ವಿರುದ್ಧ ಹೊರಡಿಸಲಾಗಿದ್ದ ಬಾಡಿ ವಾರಂಟ್ ಜಾರಿಗೊಳಿಸದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಷೋಕಾಸ್‌ ನೋಟಿಸ್‌ ಪಡೆದಿದ್ದ ಕಾರಾಗೃಹ ಡಿಜಿ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್‌, ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಕ್ಷಮೆ ಕೋರಿದರು.

ಕೋರ್ಟ್‌ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ವಿಚಾರಣೆ ವೇಳೆ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಾಲಯದ (ಸಿಸಿಎಚ್-82) ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಇಬ್ಬರೂ ಅಧಿಕಾರಿಗಳ ಖುದ್ದು ಹಾಜರಿಗೆ ಆದೇಶಿಸಿದ್ದರು.

ಈ ಆದೇಶದ ಅನ್ವಯ ಡಿಜಿ ಪರವಾಗಿ ಅಧಿಕಾರಿ ಮತ್ತು ಸೂಪರಿಂಟೆಂಡೆಂಟ್‌ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿ ಮೌಖಿಕವಾಗಿ ಕ್ಷಮೆ ಕೋರಿದರು. ಅಂತೆಯೇ, ಷೋಕಾಸ್ ನೋಟಿಸ್‌ಗೆ ವಿವರಣೆ ಸಲ್ಲಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು, ‘ಇನ್ನು ಮುಂದೆ ಈ ರೀತಿ ಕೋರ್ಟ್‌ ಆದೇಶ ಉಲ್ಲಂಘಿಸಬಾರದು’ ಎಂದು ಎಚ್ಚರಿಸಿದರು.

ADVERTISEMENT

ಈ ಹಿಂದಿನ ವಿಚಾರಣೆ ವೇಳೆ ಇ.ಡಿ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಸತ್ಯನಾರಾಯಣ ವರ್ಮಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್‌ (ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್‌ಫಾರ್ಮೇಶನ್‌ ರಿಪೋರ್ಟ್‌) ದಾಖಲಿಸಿದೆ. ಈ ಸಂಬಂಧ ಇಡಿ ಕೋರಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಕೋರ್ಟ್‌ ಅವರ ವಿರುದ್ಧ ಎರಡು ಬಾರಿ ಬಾಡಿ ವಾರಂಟ್‌ ಹೊರಡಿಸಿ ಆದೇಶಿಸಿತ್ತು. ಆದರೆ, ಕೋರ್ಟ್‌ನ ಈ ಆದೇಶವನ್ನು ಉಲ್ಲಂಘಿಸಿದ ಜೈಲು ಅಧಿಕಾರಿಗಳು ಅವರನ್ನು ಹಗರಣಕ್ಕೆ ಸಂಬಂಧಿಸಿದ ಮೂರನೇ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ವಿಚಾರಣೆಗಾಗಿ ಅವರ ವಶಕ್ಕೆ ಒಪ್ಪಿಸಿದೆ’ ಎಂದು ಆಕ್ಷೇಪಿಸಿದ್ದರು.

ಬಂಧನ ವಿಸ್ತರಣೆ:

ಇದೇ ವೇಳೆ, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ₹94 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ’ ಎನ್ನಲಾದ ಹಗರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಧೀಶರು ಇದೇ 27ರವರೆಗೆ ವಿಸ್ತರಿಸಿ ಆದೇಶಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.