ADVERTISEMENT

ನನ್ನ ಹೆಸರಿಗೆ ಮಸಿ ಬಳಿಯುವುದೇ ಬಿಜೆಪಿ ಹುನ್ನಾರ: ಸಿದ್ದರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 13:52 IST
Last Updated 19 ಜುಲೈ 2024, 13:52 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಗರಣದ ವಿಚಾರದಲ್ಲಿ ಬಿಜೆಪಿ ಹುನ್ನಾರ ನಡೆಸಿದೆ. ನನ್ನ ಹೆಸರಿಗೆ ಮಸಿ ಬಳಿಯುವುದೇ ಅವರ ಉದ್ದೇಶ. ಬಿಜೆಪಿ ಅವಧಿಯ ಎಲ್ಲ ಹಗರಣಗಳನ್ನು ತನಿಖೆಗೆ ಒಪ್ಪಿಸುತ್ತೇವೆ’  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ವಿಪಕ್ಷಗಳ ಆರೋಪಕ್ಕೆ ಶುಕ್ರವಾರ  ಸುದೀರ್ಘ ಉತ್ತರ ನೀಡಿದ ಅವರು, ‘ನಮ್ಮ ಸರ್ಕಾರವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ಸರ್ಕಾರ ಎಂದು ಬಿಂಬಿಸುವುದು ಬಿಜೆಪಿ ಉದ್ದೇಶ’ ಎಂದು ಹರಿಹಾಯ್ದರು.

ADVERTISEMENT

ಬಿಜೆಪಿ, ಆ ಪಕ್ಷದ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಮಹಿಳೆಯರ ವಿರುದ್ಧವಾಗಿದೆ. ದಮನಿತರ ಪರವಾದ ನಿಲುವು, ಪ್ರತಿಯೊಂದು ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಎಂದು ಬಲವಾಗಿ ಪ್ರತಿಪಾದಿಸಿದರು.

ಇದೇ ಬಿಜೆಪಿ ಆಡಳಿತದಲ್ಲಿದ್ದಾಗ ಯಾವ ಯಾವ ನಿಗಮಗಳಲ್ಲಿ ಏನೇನೆಲ್ಲ ನುಂಗಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ಹೇಳಬಲ್ಲರು ಎಂಬುದು ಸಾಬೀತಾಗಿದೆ ಎಂದು ಕುಟುಕಿದರು.

ರಾಜ್ಯ ಸರ್ಕಾರವು ಸಿಬಿಐನವರು ಎಫ್‌ಐಆರ್‌ ದಾಖಲಿಸಿ ಮೇಲೆ ಎಸ್‌ಐಟಿ ರಚಿಸಿದೆ ಎಂದು ಬಿ.ವೈ.ವಿಜಯೇಂದ್ರ ಸುಳ್ಳು ಹೇಳಿದ್ದಾರೆ. ವಾಸ್ತವವಾಗಿ ಹೈಗ್ರೌಂಡ್ಸ್‌ ಪೋಲಿಸ್‌ ಠಾಣೆಯಲ್ಲಿ 28.05.24 ರಂದು ಕ್ರೈಮ್‌ ನಂ 118/2024 ರಂತೆ ಎಫ್‌ಐಆರ್‌ ದಾಖಲಾಗಿದೆ. ರಾಜ್ಯ ಸರ್ಕಾರ 31.05.24 ರಂದು ಆದೇಶ ಹೊರಡಿಸಿ ಎಸ್‌ಐಟಿ ರಚಿಸಿದೆ. ಸಿಬಿಐ 3.6.24 ರಂದು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಜೂನ್‌ 3 ರಂದು ಯೂನಿಯನ್‌ ಬ್ಯಾಂಕ್ ಆಫ್‌ ಇಂಡಿಯಾದ ಜನರಲ್ ಮ್ಯಾನೇಜರ್‌ ಗಿರೀಶ್ ಚಂದ್ರ ಅವರು ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಮುಖ್ಯ ಮ್ಯಾನೇಜರ್‌ ಸುಚಿಸ್ಮಿತಾ ರಾವುಲ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ತನಿಖೆ ನಡೆಸುವಂತೆ ಸಿಬಿಐಗೂ ಪತ್ರ ಬರೆದಿದ್ದಾರೆ. ಸಿಬಿಐಗೆ ಬರೆದಿರುವ ಪತ್ರದ ಮುಖ್ಯಾಂಶದ ಪ್ರಕಾರ, ಬ್ಯಾಂಕಿನವರೇ ಒಪ್ಪಿಕೊಂಡಿರುವಂತೆ ಬ್ಯಾಂಕಿನ ಸಿಬ್ಬಂದಿಯು ನೇರವಾಗಿ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ಎ. ರಾಜಶೇಖರ ಅವರು ಮೇ 28ರಂದು ನಿಗಮದ ಹಣ ಖಾಲಿ ಆಗಿರುವುದರ ಕುರಿತು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ, ನಿಗಮದಲ್ಲಿ ನಡೆದ ಅವ್ಯವಹಾರ ಕುರಿತು ರಾಜಶೇಖರ ಅವರು ಯೂನಿಯನ್ ಬ್ಯಾಂಕಿನ ಎಂ.ಡಿ ಮತ್ತು ಸಿಇಓ ಎ.ಮಣಿಮೇಖಲೈ, ನಿತೇಶ್‌ ರಂಜನ್‌, ರಾಮಸುಬ್ರಮಣ್ಯಂ, ಸಂಜಯ್ ರುದ್ರ, ಪಂಕಜ್‌ ದ್ವಿವೇದಿ, ಸುಚಿಸ್ಮಿತಾ ರಾವುಲ್‌ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದರು. 

ಅಕ್ರಮ ನಡೆದಿದೆ ಎಂದು ಗೊತ್ತಾದ ಕೂಡಲೇ ಎಫ್‌ಐಆರ್ ದಾಖಲಾಗಿದೆ. ಅಕ್ರಮದ ಕುರಿತು ತನಿಖೆ ನಡೆಸಲು ಸಮರ್ಥ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮೇ 31 ರಂದು ಎಸ್ಐಟಿ ರಚಿಸಿದ್ದೇವೆ. ಮೇಲಿನ ಎರಡೂ ಕ್ರಿಮಿನಲ್‌ ಕೇಸ್‌ಗಳನ್ನು ತನಿಖೆ ಮಾಡುವ ಉದ್ದೇಶದಿಂದಲೇ 4 ಜನ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಎಚ್‌.ಡಿ 64 ಸಿಐಡಿ 2024 ರ ಆದೇಶದಂತೆ ಈ ತಂಡ ರಚನೆ ಆಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.