ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ ತನಿಖೆಗೆ ವಹಿಸಬೇಕು’ ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ಮೇಲಿನ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು’ ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ರಿಟ್ ಅರ್ಜಿ ಸಿಂಧುತ್ವದ ಮೇಲಿನ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪೂರ್ಣಗೊಳಿಸಿತು.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಪರ ರವಿವರ್ಮ ಕುಮಾರ್ ಮತ್ತು ಯೂನಿಯನ್ ಬ್ಯಾಂಕ್ ಪರ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಹಾಗೂ ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯದ ವಿವಾದ ಎಂಬುದಕ್ಕೆ ಸಂಬಂಧಿಸಿದಂತೆ ಇದನ್ನು ಸಂವಿಧಾನದ 131ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ಧರಿಸಬೇಕೆ? ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ–1949 ಕಲಂ 35ಎ ಅಡಿ ಹೊರಡಿಸಿರುವ ಮಾಸ್ಟರ್ ಸುತ್ತೋಲೆಯ ಪ್ರಕಾರ ನಿರ್ದಿಷ್ಟ ಮೊತ್ತದ ಹಣಕಾಸು ಅವ್ಯವಹಾರವನ್ನು ಸಿಬಿಐ ತನಿಖೆ ನಡೆಸಬೇಕೇ? ಎಂಬುದರ ಸಿಂಧುತ್ವಕ್ಕೆ ತೀರ್ಪಿನಲ್ಲಿ ಉತ್ತರಿಸಲಾಗುವುದು’ ಎಂದು ವಿವರಿಸಿತು. ಅಂತೆಯೇ, ಹೈಕೋರ್ಟ್‌ನ ದಸರಾ ರಜೆ ಮುಗಿದ ಕೂಡಲೇ ಅಂದರೆ ಅಕ್ಟೊಬರ್ 14 ಅಥವಾ 15ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.