ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ನಾಗೇಂದ್ರ, ದದ್ದಲ್‌ಗೆ ಎಸ್‌ಐಟಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 0:40 IST
Last Updated 6 ಜುಲೈ 2024, 0:40 IST
<div class="paragraphs"><p>ಬಸನಗೌಡ ದದ್ದಲ್‌, ಬಿ.ನಾಗೇಂದ್ರ&nbsp;</p></div>

ಬಸನಗೌಡ ದದ್ದಲ್‌, ಬಿ.ನಾಗೇಂದ್ರ 

   

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

‘ಸಿಐಡಿ ಕಚೇರಿಗೆ ಜುಲೈ 9ರಂದು (ಮಂಗಳವಾರ) ವಿಚಾರಣೆಗೆ ಬರುವಂತೆ ಇಬ್ಬರಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ಎಸ್‌ಐಟಿ ಮುಖ್ಯಸ್ಥ ಮನೀಶ್ ಖರ್ಬೀಕರ್‌ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವಿಚಾರಣಾ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡು ಹೇಳಿಕೆ ದಾಖಲು ಮಾಡಿಕೊಳ್ಳುತ್ತೇವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ADVERTISEMENT

ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹೊರಬಿದ್ದ ಬಳಿಕ ಜೂನ್‌ 6ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಗರಣದಲ್ಲಿ ಅವರ ಪಾತ್ರದ ಕುರಿತು ಆರಂಭದಿಂದಲೂ ಆರೋಪ ಇತ್ತಾದರೂ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಿರಲಿಲ್ಲ. ಎಫ್‌ಐಆರ್‌ನಲ್ಲೂ ಅವರ ಹೆಸರನ್ನು ಉಲ್ಲೇಖಿಸಿಲ್ಲ.

ನಾಗೇಂದ್ರ ಹಾಗೂ ಬಸನಗೌಡ ದದ್ದಲ್‌ ವಿರುದ್ಧ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿಯ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು. ವಿರೋಧ ಪಕ್ಷಗಳ ಮುಖಂಡರು ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯದಾದ್ಯಂತ ಪ್ರತಿಭಟನೆ ಆರಂಭಿಸಿದ ಬೆನ್ನಲ್ಲೇ ಇಬ್ಬರಿಗೂ ಎಸ್ಐಟಿ ನೋಟಿಸ್ ಜಾರಿಗೊಳಿಸಿ, ತನಿಖೆ ಚುರುಕುಗೊಳಿಸಿದೆ.

ನಿಗಮದ ಖಾತೆಯಿಂದ ₹94.73 ಕೋಟಿ ಹಣ ಅಕ್ರಮವಾಗಿ ‘ಹೈದರಾಬಾದ್‌ನ ‘ಫಸ್ಟ್‌ ಫೈನಾನ್ಸ್ ಕ್ರೆಡಿಟ್ ಕೋ– ಆಪರೇಟಿವ್‌ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್‌) ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಆಗಿತ್ತು. ಹಣ ವರ್ಗಾವಣೆ ಮಾಹಿತಿ ಗೊತ್ತಾದ ಮೇಲೆ ನಿಗಮದ ಅಧೀಕ್ಷಕರಾಗಿದ್ದ ಪಿ.ಚಂದ್ರಶೇಖರನ್ ಅವರು ಹಣ ವಾಪಸ್ ಹಾಕುವಂತೆ ಸೂಚಿಸಿದ್ದರು. ಈ ಬೆಳವಣಿಗೆ ಬಳಿಕ ₹5 ಕೋಟಿಯಷ್ಟು ಹಣ ನಿಗಮದ ಖಾತೆಗೆ ವಾಪಸ್‌ ಬಂದಿತ್ತು. ಉಳಿದ ಹಣ ವಾಪಸ್‌ ಬಂದಿರಲಿಲ್ಲ. ಇದರಿಂದ ಬೆದರಿದ್ದ ಚಂದ್ರಶೇಖರನ್‌ ಅವರು ಮರಣ ಪತ್ರ ಬರೆದಿಟ್ಟು ಶಿವಮೊಗ್ಗದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಹಣ ದುರ್ಬಳಕೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಮೇ 28ರಂದು ಪ್ರಕರಣ ದಾಖಲಾಗಿತ್ತು. ಬ್ಯಾಂಕ್‌ ಅಧಿಕಾರಿಗಳ ಹೆಸರನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು. ಅದಾದ ಮೇಲೆ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಿ ಆದೇಶಿಸಿತ್ತು.

ನಾಗೇಂದ್ರ ಆಪ್ತರ ಬಂಧನ: ‘ಹಣ ವರ್ಗಾವಣೆಯಲ್ಲಿ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್‌ ಹಾಗೂ ಅವರ ಸಂಬಂಧಿ ನಾಗೇಶ್ವರ ರಾವ್‌ ಅವರನ್ನು ಎಸ್‌ಐಟಿ ಬಂಧಿಸಿತ್ತು. ವಿಚಾರಣೆ ವೇಳೆ ಅವರು ಬಹಿರಂಗಪಡಿಸಿರುವ ಮಾಹಿತಿಗಳನ್ನು ಆಧರಿಸಿ ವಿಚಾರಣೆಗೆ ಬರಲು ನಾಗೇಂದ್ರ ಅವರಿಗೆ ಸೂಚಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ನಾಗರಾಜ್ ಸೂಚನೆ ಮೇರೆಗೆ ಹಲವು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ನಿಗಮ ಹಾಗೂ ನಿಗಮದ ಅಧಿಕಾರಿಗಳ ಹೆಸರಿನ ನಕಲಿ ಮೊಹರು ಹಾಗೂ ದಾಖಲೆಗಳನ್ನು ನಾಗರಾಜ್‌, ನಾಗೇಶ್ವರ ರಾವ್ ಅವರೇ ಸೃಷ್ಟಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿತ್ತು.

ಅಧ್ಯಕ್ಷರ ಆಪ್ತನಿಗೆ ಹಣ ಸಂದಾಯ?
ಬಸನಗೌಡ ದದ್ದಲ್‌ ಅವರ ಆಪ್ತರೊಬ್ಬರಿಗೆ ಹಣ ಸಂದಾಯ ಆಗಿರುವುದಕ್ಕೆ ದಾಖಲೆಗಳು ಸಿಕ್ಕಿದ್ದು, ಆ ಮಾಹಿತಿ ಆಧರಿಸಿ ಅಧ್ಯಕ್ಷರನ್ನು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ‘ಅಧ್ಯಕ್ಷರ ಆಪ್ತನಿಗೆ ಬ್ಯಾಂಕ್‌ ಖಾತೆ ಅಥವಾ ಡಿಜಿಟಲ್ ಪೇಮೆಂಟ್‌ ಮೂಲಕ ಹಣ ಸಂದಾಯ ಆಗಿಲ್ಲ. ನಗದು ರೂಪದಲ್ಲಿ ಹಣ ಕೊಡಲಾಗಿದೆ. ಹೋಟೆಲ್‌ ಸೇರಿ ಹಲವು ಸ್ಥಳಗಳಲ್ಲಿದ್ದ ಸಿ.ಸಿ ಟಿವಿ ಕ್ಯಾಮೆರಾ ಪರಿಶೀಲಿಸಿ ಡಿವಿಆರ್‌ ಜಪ್ತಿ ಮಾಡಲಾಗಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ ಚಾಟಿಂಗ್‌ ಸಾಕ್ಷ್ಯ

ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜೆ.ಪದ್ಮನಾಭ್‌ ಹಾಗೂ ಮಾಜಿ ಲೆಕ್ಕಾಧಿಕಾರಿ ಪರಶುರಾಮ ಎಂಬವರನ್ನೂ ಎಸ್‌ಐಟಿ ಬಂಧಿಸಿ ವಿಚಾರಣೆ ನಡೆಸಿದೆ. ಎಂಟನೇ ಆರೋಪಿ ಆಗಿರುವ ಪರಶುರಾಮ ಅವರು ಈ ಹಿಂದೆ ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನೂ ಸಲ್ಲಿಸಿದ್ದರು.

‘ಮೊಬೈಲ್‌ನ ಸಂಪರ್ಕ ಪಟ್ಟಿಯಲ್ಲಿರುವ ಬಸನಗೌಡ ದದ್ದಲ್‌ ಹೆಸರು ಹಾಗೂ ಆರೋಪಿ ಮಧ್ಯೆ ವಾಟ್ಸ್‌ ಆ್ಯಪ್‌ ಚಾಟಿಂಗ್‌ಗಳನ್ನು ಪುರಾವೆ ಆಗಿ ಪರಿಗಣಿಸುವಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ವಕೀಲರ ಮೂಲಕ ಪ್ರಮಾಣಪತ್ರ ಸಲ್ಲಿಕೆ ಮಾಡಲಾಗಿತ್ತು. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗಿದೆ. ಕೆಲವು ಮಹತ್ವದ ಸಾಕ್ಷ್ಯಗಳು ಲಭಿಸಿವೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಬಂಧಿತರು ಯಾರು?

  • ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷ ಸತ್ಯನಾರಾಯಣ

  • ಮಧ್ಯವರ್ತಿಗಳಾದ ಸತ್ಯನಾರಾಯಣ ವರ್ಮಾ

  • ಹೈದರಾಬಾದ್‌ನ ಚಂದ್ರಮೋಹನ್ ಶ್ರೀನಿವಾಸ್‌ ಹಾಗೂ ಜಗದೀಶ್

  • ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜೆ.ಪದ್ಮನಾಭ್‌ ಹಾಗೂ ಹಿಂದಿನ ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣವರ

  • ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್‌ ಹಾಗೂ ಅವರ ಸಂಬಂಧಿ ನಾಗೇಶ್ವರ ರಾವ್‌

  • ದಾವಣಗೆರೆ ಜಿಲ್ಲೆ ಚನ್ನಗಿರಿಯ ತೇಜ ತಮ್ಮಯ್ಯ

ಕೆಲವು ಪ್ರಮುಖರಿಗೆ ಹಣ ಸಂದಾಯ
ಈ ಪ್ರಕರಣದಲ್ಲಿ ಇದುವರೆಗೂ ಒಟ್ಟು ₹28 ಕೋಟಿ ಮೊತ್ತದ ನಗದು ಚಿನ್ನಾಭರಣ ಹಾಗೂ ಬ್ಯಾಂಕ್‌ಗಳಲ್ಲಿದ್ದ ಹಣವನ್ನು ಎಸ್‌ಐಟಿ ಪೊಲೀಸರು ಜಪ್ತಿ ಮಾಡಿದ್ದಾರೆ. 11 ಮಂದಿಯನ್ನು ಬಂಧಿಸಿ ಅವರಿಂದ ₹14 ಕೋಟಿ ನಗದು ಬ್ಯಾಂಕ್‌ಗಳಲ್ಲಿ ₹10 ಕೋಟಿ ಮುಟ್ಟುಗೋಲು ಹಾಗೂ ₹4 ಕೋಟಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ‘ಫಸ್ಟ್‌ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್‌ ಸೊಸೈಟಿ’ಯಿಂದ 18 ಖಾತೆಗಳಿಗೆ ಹಣ ವರ್ಗಾವಣೆ ಆಗಿದ್ದು ತನಿಖೆ ಆರಂಭದಲ್ಲಿ ಪತ್ತೆಯಾಗಿತ್ತು. ತನಿಖೆ ಮುಂದುವರಿಸಿದ್ದ ಎಸ್‌ಐಟಿಗೆ 700ಕ್ಕೂ ಹೆಚ್ಚು ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಮಾಹಿತಿ ಲಭಿಸಿತ್ತು. ಅದರಲ್ಲಿ ಚಿನ್ನಾಭರಣ ಮಳಿಗೆಗಳು ಹೋಟೆಲ್‌ ಹಾಗೂ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ ಮಾಲೀಕರ ಖಾತೆಗಳೂ ಸೇರಿ ಒಟ್ಟು 197 ಖಾತೆಗಳಿಂದ ಅಂದಾಜು ₹10 ಕೋಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಖಾತೆದಾರರಿಗೆ ಕಮಿಷನ್‌ ನೀಡಿ ಹಣ ಡ್ರಾ ಮಾಡಿಕೊಳ್ಳಲಾಗಿತ್ತು. ಅಲ್ಲದೇ ವರ್ಗಾವಣೆ ಆಗಿರುವ ಹಣವು ಬೆಂಗಳೂರು ಬಳ್ಳಾರಿಯ ‘ಕೆಲವು ಪ್ರಮುಖರಿಗೆ’ ನಗದು ರೂಪದಲ್ಲಿ ದೊಡ್ಡ ಮೊತ್ತದಲ್ಲಿ ಸಂದಾಯ ಆಗಿರುವುದನ್ನು ಎಸ್‌ಐಟಿ ಪತ್ತೆಹಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.