ADVERTISEMENT

ವಾಲ್ಮೀಕಿ ನಿಗಮ ಹಗರಣ | ಆರೋಪ ಪಟ್ಟಿ: ನಾಗೇಂದ್ರ, ದದ್ದಲ್‌ ಹೆಸರಿಲ್ಲ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹89.63 ಕೋಟಿ ಅಕ್ರಮ ವರ್ಗಾವಣೆ

ರಾಜೇಶ್ ರೈ ಚಟ್ಲ
Published 13 ಆಗಸ್ಟ್ 2024, 0:09 IST
Last Updated 13 ಆಗಸ್ಟ್ 2024, 0:09 IST
<div class="paragraphs"><p>ವಾಲ್ಮೀಕಿ ನಿಗಮ</p></div>

ವಾಲ್ಮೀಕಿ ನಿಗಮ

   

ಚಿತ್ರ ಕೃಪೆ: ಕರ್ನಾಟಕ ಸರ್ಕಾರ ವೆಬ್‌ಸೈಟ್‌

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ₹89.63 ಕೋಟಿ ಅಕ್ರಮ ವರ್ಗಾವಣೆ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಾಥಮಿಕ ಆರೋಪ ಪಟ್ಟಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್‌ ಅವರ ಹೆಸರು ಇಲ್ಲ.

ADVERTISEMENT

ತನಿಖಾಧಿಕಾರಿ ಡಿವೈಎಸ್‌ಪಿ ಬಿ.ಎಸ್‌. ಶ್ರೀನಿವಾಸ್‌ ರಾಜ್‌ ಸಲ್ಲಿಸಿರುವ ದೋಷಾರೋಪ ಪಟ್ಟಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 12 ಆರೋಪಿಗಳ ವಿರುದ್ಧ ಆರೋಪ ಮಾಡಲಾಗಿದ್ದು, ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜೆ.ಜಿ. ಪದ್ಮನಾಭ ಅವರನ್ನು ಐದನೇ,  ನಿಗಮದ ಲೆಕ್ಕಾಧಿಕಾರಿ ಪರಶುರಾಮ್‌ ದುರುಗಣ್ಣವರ್ ಆರನೇ ಆರೋಪಿಯಾಗಿಸಲಾಗಿದೆ.  12ನೇ ಆರೋಪಿ ಎಂದು ಹೆಸರಿಸಲಾಗಿರುವ ನೆಕ್ಕಂಟಿ ನಾಗರಾಜ್, ಬಿ. ನಾಗೇಂದ್ರ ಅವರ ಆಪ್ತ. ಆದರೆ, ಆ ಬಗ್ಗೆ ಪಟ್ಟಿಯಲ್ಲಿ ಉಲ್ಲೇಖ ಇಲ್ಲ.

ಆರೋಪಗಳಿಗೆ ಸಂಬಂಧಿಸಿದಂತೆ ನಿಗಮದ ಪ್ರಧಾನ ವ್ಯವಸ್ಥಾಪಕ ಎ. ರಾಜಶೇಖರ್‌, ಅಧೀಕ್ಷಕ ಎಚ್.ಕೆ. ವಿಶ್ವನಾಥ್‌ ಸೇರಿ ಒಟ್ಟು 109 ಸಾಕ್ಷಿಗಳಿದ್ದಾರೆ ಎಂದೂ ಪಟ್ಟಿ ಹೇಳಿದೆ.

12 ಆರೋಪಿಗಳು ಶಾಮೀಲಾಗಿ ಪಿತೂರಿ ನಡೆಸಿ, ವಂಚನೆಯ ಉದ್ದೇಶದಿಂದಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದಾರೆ. ನಂತರ ಆ ಖಾತೆಗಳಿಗೆ ನಿಗಮದ ಖಾತೆಯಿಂದ ₹ 89.63ಕೋಟಿ ವರ್ಗಾಯಿಸಿದ್ದಾರೆ. ನಿಗಮ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡುವ ಮೂಲಕ ನಂಬಿಕೆ ದ್ರೋಹ ಮತ್ತು ಮೋಸ ಎಸಗಿರುವುದು ದೃಢಪಟ್ಟಿದೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ಸಂಚುಕೋರ ವರ್ಮಾ: ‘ಮೊದಲ ಆರೋಪಿ ಸತ್ಯನಾರಾಯಣ ವರ್ಮಾ, 2023ರ ಅ. 12, 15 ಮತ್ತು 16ರಿಂದ 18ರವರೆಗೆ ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್ ಸಮೀಪದ ಹೋಟೆಲ್‌ ರಾಯಲ್‌ ಏಸ್ ಬ್ಯೂಟೆಕ್‌ನಲ್ಲಿ ಉಳಿದುಕೊಂಡಿದ್ದ. ಬಳಿಕ ಮೊದಲೇ ಪರಿಚಯವಿದ್ದ ಆಂಧ್ರ ಪ್ರದೇಶದ ಗುಂಟೂರು ನಿವಾಸಿ ಶ್ರೀನಿವಾಸ ರಾವ್‌ ಕಾಕಿ ವಾಸವಿರುವ ಬೆಂಗಳೂರಿನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ. ತನ್ನ ಪರಿಚಿತ ನಾಗೇಶ್ವರ ರಾವ್‌ ಮೂಲಕ, ಆತನ ಬಾವ ನೆಕ್ಕಂಟಿ ನಾಗರಾಜನನ್ನು ಸಂಪರ್ಕಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭನನ್ನು ಸಂಪರ್ಕಿಸಿದ್ದ. ನಂತರ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ ನಿಗಮದ ಹಣವನ್ನು ಲಪಟಾಯಿಸಲು ಒಳಸಂಚು ರೂಪಿಸಿದ್ದ’ ಎಂದು ಆರೋಪಿಸಲಾಗಿದೆ.

‘ತನಗೆ ಪರಿಚಯವಿದ್ದ ಚಂದ್ರಮೋಹನ್‌ ಮೂಲಕ ಎಂ.ಜಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕರನ್ನು ಪರಿಚಯಿಸಿಕೊಂಡಿದ್ದ ವರ್ಮಾ, ಪದ್ಮನಾಭ್‌ ಮೂಲಕ ವಸಂತನಗರದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿದ್ದ ನಿಗಮದ ₹89.63ಕೋಟಿಯ ಅನ್ನು ಎಂ.ಜಿ. ರಸ್ತೆಯ ಶಾಖೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಆ ಬಳಿಕ, ನಕಲಿ ವ್ಯಾಪಾರ ಸಂಸ್ಥೆಗಳ ದಾಖಲಾತಿಗಳನ್ನು ನೀಡಿ ಖಾತೆಗಳನ್ನು ತೆರೆದು ಆ ಖಾತೆಗಳಿಗೆ ಈ ಹಣ ವರ್ಗಾಯಿಸಲು ಜಸ್ಮಾದೇವಿ ಭವನದಲ್ಲಿರುವ ನಿಗಮದ ಕಚೇರಿ ಮತ್ತು ಇತರ ಸ್ಥಳಗಳಲ್ಲಿ ಪರಸ್ಪರ ದೂರವಾಣಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಒಳ ಸಂಚು ರೂಪಿಸಿದ್ದ ಎಂದೂ ಆರೋಪ ಹೊರಿಸಲಾಗಿದೆ.

₹3.92 ಕೋಟಿ ಪಡೆದ ಎಂ.ಡಿ: ‘ನೆಕ್ಕಂಟಿ ನಾಗರಾಜ್‌ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಪದ್ಮನಾಭ, ನಾಗೇಶ್ವರ ರಾವ್‌ ಮೂಲಕ, ಸತ್ಯನಾರಾಯಣನ ಸೂಚನೆಯಂತೆ ವಿವಿಧ ಬ್ಯಾಂಕ್‌ಗಳಲ್ಲಿದ್ದ ನಿಗಮದ ಹಣವನ್ನು ಯೂನಿಯನ್ ಬ್ಯಾಂಕಿನ ಎಂ.ಜಿ. ರಸ್ತೆಯ ಶಾಖೆಗೆ ವರ್ಗಾಯಿಸಿದ್ದಾನೆ. ಹೈದರಾಬಾದಿನ ಫಸ್ಟ್‌ ಫೈನಾನ್ಸ್‌ನ 18 ನಕಲಿ ವ್ಯಾಪಾರ ಸಂಸ್ಥೆಗಳ ಖಾತೆಗೆ ವರ್ಗಾಯಿಸುವ ಮೂಲಕ ಸತ್ಯನಾರಾಯಣ ವರ್ಮಾಗೆ ಅನುಕೂಲ ಮಾಡಿಕೊಟ್ಟು ಅಪರಾಧ ಎಸಗಿದ್ದಾನೆ. ಅಕ್ರಮವಾಗಿ ₹3.92 ಕೋಟಿ ಪಡೆದಿದ್ದಾನೆ’ ಎಂದು ವರದಿ ಉಲ್ಲೇಖಿಸಿದೆ.

ನೆಕ್ಕಂಟಿ ನಾಗರಾಜ್‌ ಪಾತ್ರವೇನು? 

‘ನೆಕ್ಕಂಟಿ ನಾಗರಾಜ್‌ ತನ್ನ ಸಂಬಂಧಿ ನಾಗೇಶ್ವರ ರಾವ್‌ ಮೂಲಕ 2023ರ ನವೆಂಬರ್‌ನಲ್ಲಿ ಸತ್ಯನಾರಾಯಣ ವರ್ಮಾನನ್ನು ಪರಿಚಯ ಮಾಡಿಕೊಂಡಿದ್ದ. 2024ರ ಫೆಬ್ರುವರಿಯಲ್ಲಿ ನಿಗಮದ ಎಂ.ಡಿ ಪದ್ಮನಾಭ ಅವರನ್ನು ಭೇಟಿ ಮಾಡಿ, ನಿಗಮದ ಹಣವನ್ನು ಠೇವಣಿ ಇಡುವ ಬಗ್ಗೆ ಚರ್ಚೆ ನಡೆಸಿದ್ದ. ಸತ್ಯನಾರಾಯಣ ವರ್ಮಾ ಹಣ ವರ್ಗಾವಣೆಗೆ ಹೇಳಿದಾಗಲೆಲ್ಲ, ನೆಕ್ಕಂಟಿ ನಾಗರಾಜ್‌ ದೂರವಾಣಿ ಮೂಲಕ ಪದ್ಮನಾಭ ಅವರನ್ನು ಸಂಪರ್ಕಿಸಿ ಹಣ ಅಕ್ರಮ ವರ್ಗಾವಣೆಗೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ’ ಎಂದು ಆರೋಪ ಹೊರಿಸಲಾಗಿದೆ. 

ಶೇ 1 ಕಮಿಷನ್‌ ಭರವಸೆ

‘ತಾನು ಹೇಳಿದ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಟ್ಟರೆ ಶೇ 1 ಕಮಿಷನ್‌ ನೀಡುವುದಾಗಿ ನಾಗೇಶ್ವರ ರಾವ್‌ಗೆ ಸತ್ಯನಾರಾಯಣ ವರ್ಮಾ ನಂಬಿಸಿದ್ದರು. ಹೀಗಾಗಿ, ಬೆಂಗಳೂರಿನ ಶಾಂಗ್ರಿ–ಲಾ ಹೋಟೆಲ್‌ನಲ್ಲಿ ತನ್ನ ಬಾವ ನೆಕ್ಕಂಟಿ ನಾಗರಾಜ್‌ ಮೂಲಕ ನಿಗಮದ ಎಂ.ಡಿ ಪದ್ಮನಾಭ್‌ನನ್ನು ನಾಗೇಶ್ವರ ರಾವ್ ಭೇಟಿ ಮಾಡಿದ್ದ.  ನಿಗಮದ ₹89.63 ಕೋಟಿ ವರ್ಗಾವಣೆಯಾಗಲು ಕಾರಣನಾಗಿರುವ ರಾವ್‌, ತನ್ನ ಕೆಲಸಕ್ಕೆ ₹1.50 ಕೋಟಿ ಅಕ್ರಮ ಲಾಭ ಮಾಡಿಕೊಂಡಿದ್ದಾನೆ’ ಎಂದೂ ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.