ADVERTISEMENT

ವಾಲ್ಮೀಕಿ ನಿಗಮದ ಹಗರಣ | ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 31 ಮೇ 2024, 13:24 IST
Last Updated 31 ಮೇ 2024, 13:24 IST
   

ಕನಕಪುರ: ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ವಾಸ್ತವಾಂಶ ಪರಿಶೀಲನೆ ಮಾಡುತ್ತಿದ್ದೇವೆ. ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡಿದೆ. ಈಗ ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ’ ಎಂಬ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆ ಕುರಿತು ಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ವಾಸ್ತವಾಂಶ ಹೊರಬಂದ ಬಳಿಕ ರಾಜೀನಾಮೆ ಕುರಿತು ತೀರ್ಮಾನ ಮಾಡುತ್ತೇವೆ’ ಎಂದರು.

‘ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಜೂನ್ 6ರವರೆಗೆ ಯಾಕೆ ಕಾಯಬೇಕು. ಈಗಿನಿಂದಲೇ ಹೋರಾಟ ಮಾಡಲಿ. ಅವರಿಗೆ ಬೇಡ ಎಂದಿರುವವರು ಯಾರು. ಅವತ್ತೇನಾದರೂ ಒಳ್ಳೆಯ ಮುಹೂರ್ತ ಇದೆಯೇ? ಯಾವ ವಿಷಯಕ್ಕೆ ಬಾಯಿ ಬಿಡಬೇಕಿತ್ತೊ ಅದಕ್ಕೆ ಬಾಯಿ ಬಿಡದವರು ಈಗ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಕೇಸರಿ ಬಟ್ಟೆ ಹಾಕಿಸಿದ್ದನ್ನು ಮರೆತರಾ?: ‘ಪೊಲೀಸ್ ಠಾಣೆಗೆ ರಕ್ಷಣೆ ನೀಡುವ ಪರಿಸ್ಥಿತಿ ಬಂದಿದೆ’ ಎಂಬ ಆರ್. ಅಶೋಕ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ, ‘ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಹಬ್ಬಗಳ ಸಂದರ್ಭದಲ್ಲಿ ಪೊಲೀಸ್‌ ಠಾಣೆಯಲ್ಲೇ ಅಧಿಕಾರಿಗಳಿಗೆ ಸಮವಸ್ತ್ರದ ಬದಲು ಕೇಸರಿ ಬಟ್ಟೆ ಹಾಕಿಸಿದ್ದನ್ನು ಅಶೋಕ್ ಅವರು ಮರೆತಿದ್ದಾರಾ?’ ಎಂದು ತಿರುಗೇಟು ನೀಡಿದರು.

ಪ್ರಜ್ವಲ್ ರೇವಣ್ಣ ಬಂಧನ ಕುರಿತ ಪ್ರಶ್ನೆಗೆ, ‘ಮಾಧ್ಯಮಗಳ ಮೂಲಕ ಬಂಧನದ ವಿಚಾರ ಗೊತ್ತಾಯಿತು. ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಅವರು ವಿಚಾರಣೆ ಮಾಡುತ್ತಾರೆ. ಆ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲಿ’ ಎಂದರು.

‘ಮೇಲ್ಮನೆ ಪ್ರವೇಶ: ಹೈಕಮಾಂಡ್‌ ಕೈಗೆ ಪಟ್ಟಿ’

‘ವಿಧಾನ ಪರಿಷತ್‌ ಸ್ಥಾನಗಳಿಗೆ ಆಯ್ಕೆ ಮಾಡಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಹೈಕಮಾಂಡ್ ಕೈಗೆ ಕೊಟ್ಟು ಬಂದಿದ್ದೇವೆ. ಅವರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪದವೀಧರರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಅವರ ಗೆಲುವಿಗಾಗಿ ಈಗಾಗಲೇ ಎಲ್ಲಾ ಕಡೆ ಪ್ರವಾಸ ಮಾಡಿ ಪ್ರಚಾರ ಮಾಡಿದ್ದೇನೆ. ನಮ್ಮ ಕ್ಷೇತ್ರದಲ್ಲೂ ಮುಖಂಡರು ಹಾಗೂ ಕಾರ್ಯಕರ್ತರಿಗೆ ಚುನಾವಣೆಯು ಜವಾಬ್ದಾರಿ ನೀಡಲಾಗಿದೆ. ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅ. ದೇವೇಗೌಡ ಅವರು ಕಣಕ್ಕಿಳಿದಿರುವುರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಅಭ್ಯರ್ಥಿ ಉತ್ತಮ ಕೆಲಸ ಮಾಡಿಕೊಂಡು ಬಂದಿರುವುದರಿಂದ ಖಂಡಿತವಾಗಿಯೂ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇವೇಗೌಡ ಅವರು ಮುಂಚೆ ಜೆಡಿಎಸ್‌ನಲ್ಲಿದ್ದರು. ನಂತರ ಬಿಜೆಪಿಗೆ ಹೋದರು. ಈಗ ಬಿಜೆಪಿ ಮತ್ತು ಜೆಡಿಎಸ್‌ನವರು ಒಂದಾಗಿದ್ದಾರೆ. ನಾನು ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಮ್ಮ ಅಭ್ಯರ್ಥಿ ಅವರಿಗಿಂತ ಉತ್ತಮವಾಗಿದ್ದಾರಷ್ಟೇ’ ಎಂದರು.

ನನ್ನ ವಿರುದ್ಧ ಯಾರು ಯಾಗ ಮಾಡಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ. ನಮಗೆ ಆಶೀರ್ವಾದ ಮಾಡಲು  ಜನರು ಹಾಗೂ ನಾನು ನಂಬಿರುವ ಶಕ್ತಿ ಇದೆ. ಜನರ ಪ್ರಾರ್ಥನೆ ಮತ್ತು ಆ ಶಕ್ತಿ ನನ್ನನ್ನು ಕಾಪಾಡಲಿದೆ
– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.