ADVERTISEMENT

ಎಸ್‌ಟಿ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಆರಂಭ

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 16:00 IST
Last Updated 28 ಅಕ್ಟೋಬರ್ 2023, 16:00 IST
<div class="paragraphs"><p>ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ&nbsp; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಜಾತಮ್ಮ, ಸಿ. ವೆಂಕಟೇಶುಲು (ಎನ್.ವೈ.ಹನುಮಂತಪ್ಪ ಅವರ ಪರವಾಗಿ), ಜಿ.ಕೆ. ಮಹಾಂತಪ್ಪ, ಮಹಾದೇವಮ್ಮ ರಂಗಸ್ವಾಮಿ, ಸುಕನ್ಯಾ ಮಾರುತಿ, ರಾಮಣ್ಣ ಮಹಾದೇವ ಗಸ್ತಿ, ಸೋಮಣ್ಣ, ಶಾರದಾ ಪ್ರಭು ಹುಲಿ ನಾಯಕ ಅವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು.</p></div>

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಜಾತಮ್ಮ, ಸಿ. ವೆಂಕಟೇಶುಲು (ಎನ್.ವೈ.ಹನುಮಂತಪ್ಪ ಅವರ ಪರವಾಗಿ), ಜಿ.ಕೆ. ಮಹಾಂತಪ್ಪ, ಮಹಾದೇವಮ್ಮ ರಂಗಸ್ವಾಮಿ, ಸುಕನ್ಯಾ ಮಾರುತಿ, ರಾಮಣ್ಣ ಮಹಾದೇವ ಗಸ್ತಿ, ಸೋಮಣ್ಣ, ಶಾರದಾ ಪ್ರಭು ಹುಲಿ ನಾಯಕ ಅವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು.

   

ಪ್ರಜಾವಾಣಿ ಚಿತ್ರ.

ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಗಿದ್ದು, ವಿಕಾಸಸೌಧದ ಕೊಠಡಿ ಸಂಖ್ಯೆ 228ರಲ್ಲಿ ಕಚೇರಿಯನ್ನೂ ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ವಿಧಾನಸೌಧದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಎಂಟು ಮಂದಿ ಸಾಧಕರಿಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವ ನಿರ್ಧಾರ ತೆಗೆದುಕೊಂಡಿದ್ದೇ ಕಾಂಗ್ರೆಸ್‌ ಸರ್ಕಾರ. ಮೊದಲು ₹ 6 ಸಾವಿರ ಕೋಟಿ ಸಿಗುತ್ತಿದ್ದ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಯ ಅನುದಾನವನ್ನು ₹ 30 ಸಾವಿರ ಕೋಟಿಗೆ ಹೆಚ್ಚಿಸಲಾಯಿತು. ಹಿಂದಿನ ಸರ್ಕಾರ ಈ ಮೊತ್ತ ಹೆಚ್ಚಿಸಲಿಲ್ಲ. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಬಜೆಟ್‌ನಲ್ಲೇ ₹ 34 ಸಾವಿರ ಕೋಟಿ ಮೀಸಲಿಟ್ಟಿದೆ ಎಂದರು.

‘ರಾಜ್ಯದ ಜನಸಂಖ್ಯೆಯ ಶೇ 17.1ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 7ರಷ್ಟು ಪರಿಶಿಷ್ಟ ಪಂಗಡದ ಜನರಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲು ಕಾನೂನು ತಂದ ಮೊದಲ ರಾಜ್ಯ ಕರ್ನಾಟಕ.  ಯಾವುದೇ ಸರ್ಕಾರಗಳು ಈ ಕಾನೂನು ಬದಲಾಯಿಸಲು ಸಾಧ್ಯವಿಲ್ಲ. 2013–2018ರವರೆಗೆ ₹88 ಸಾವಿರ ಕೋಟಿ  ಮೀಸಲಿಟ್ಟಿದ್ದೆವು’ ಎಂದು ಹೇಳಿದರು.

ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ, ವಿವಿಧ ಕ್ಷೇತ್ರಗಳ ಸಾಧಕರಾದ ಮಹಾದೇವಮ್ಮ, ರಾಮಣ್ಣ ಮಹಾದೇವ ಗಸ್ತಿ, ಜಿ.ಓ. ಮಹಾಂತಪ್ಪ, ಸೋಮಣ್ಣ, ಶಾರದ ಪ್ರಭು ಹುಲಿನಾಯಕ, ಸುಕನ್ಯಾ ಮಾರುತಿ, ಸುಜಾತಮ್ಮ ಅವರಿಗೆ ₹5 ಲಕ್ಷ ನಗದು ಒಳಗೊಂಡ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಸತೀಶ ಜಾರಕಿಹೊಳಿ, ಬಿ.ನಾಗೇಂದ್ರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಎನ್. ಚಂದ್ರಪ್ಪ ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶದಲ್ಲಿ ಸಹಕಾರ: ನಾಗೇಂದ್ರ

ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಜತೆ ಸಮುದಾಯದ 14 ಶಾಸಕರು ಹಾಗೂ 70 ಲಕ್ಷ  ಜನರು ನಿಲ್ಲುತ್ತಾರೆ. ಮುಂದಿನ ಚುನಾವಣಾ ಫಲಿತಾಂಶಗಳಲ್ಲಿ ಅಭೂತಪೂರ್ವ ಸಹಕಾರ ನೀಡಲಿದ್ದಾರೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.