ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಭಾನುವಾರವೂ ತೀವ್ರ ವಿಚಾರಣೆಗೆ ಒಳಪಡಿಸಿದರು.
ಈ ಪ್ರಕರಣದಲ್ಲಿ ಇ.ಡಿ, ನಾಗೇಂದ್ರ ಅವರನ್ನು ಜುಲೈ 18ರ ಬೆಳಗ್ಗೆವರಗೆ ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದೆ. ನಿಗಮದ ನೌಕರ ಚಂದ್ರಶೇಖರನ್ ತನ್ನ ಮರಣ ಪತ್ರದಲ್ಲಿ, ‘ಸಚಿವರ ಸೂಚನೆಯಂತೆ ಹಣ ವರ್ಗಾವಣೆ ಮಾಡಲಾಗಿತ್ತು’ ಎಂದು ಬರೆದಿದ್ದರು. ಈ ಬಗ್ಗೆ ಮತ್ತು ಹಣ ವರ್ಗಾವಣೆಯ ಇತರ ಹಂತಗಳ ಬಗ್ಗೆ ಮಾಹಿತಿ ಕಲೆಹಾಕಲು ನಾಗೇಂದ್ರ ಅವರ ವಿಚಾರಣೆ ಅಗತ್ಯವಿದೆ ಎಂದು ಹೇಳಿ ಇ.ಡಿ ಅವರನ್ನು ಕಸ್ಟಡಿಗೆ ಪಡೆದಿತ್ತು. ಈ ವಿಚಾರಗಳ ಸಂಬಂಧ ನಾಗೇಂದ್ರ ಅವರಿಗೆ ಭಾನುವಾರವೂ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ಹೇಳಿವೆ.
14 ದಿನಗಳ ಕಸ್ಟಡಿಗೆ ಮನವಿ ಮಾಡಿದ್ದರೂ ಐದು ದಿನಗಳ ಕಸ್ಟಡಿಯನ್ನಷ್ಟೇ ನ್ಯಾಯಾಲಯವು ನೀಡಿತ್ತು. ಹೀಗಾಗಿ ಲಭ್ಯವಿರುವ ಅಲ್ಪ ಅವಧಿಯಲ್ಲೇ ನಾಗೇಂದ್ರ ಅವರಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ.
ಆರೋಗ್ಯದ ಸಮಸ್ಯೆ ಇದೆ ಎಂದು ನಾಗೇಂದ್ರ ಅವರು ನ್ಯಾಯಾಧೀಶರ ಎದುರು ಹೇಳಿಕೊಂಡಿದ್ದರಿಂದ, ದಿನಕ್ಕೆ ಒಮ್ಮೆ ವೈದ್ಯಕೀಯ ತಾಪಸಣೆ ನಡೆಸಬೇಕು ಎಂದು ನ್ಯಾಯಾಲಯ ಇ.ಡಿ ಅಧಿಕಾರಿಗಳಿಗೆ ಸೂಚಿಸಿತ್ತು. ಅಂತೆಯೇ ಬೌರಿಂಗ್ ಆಸ್ಪತ್ರೆಯ ವೈದ್ಯರೊಬ್ಬರು ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿ, ಆರೋಗ್ಯ ತಾಪಸಣೆ ನಡೆಸಿದರು. ಶನಿವಾರ ನಾಲ್ವರು ವೈದ್ಯರು ತಪಾಸಣೆ ನಡೆಸಿದ್ದರು.
ಶಾಸಕ ದದ್ದಲ್‌ಗೆ ಹುಡುಕಾಟ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರಿಗೆ ಹುಡುಕಾಟ ಮುಂದುವರೆದಿದೆ. ಶನಿವಾರ ಬೆಂಗಳೂರಿನಿಂದ ಹೊರಗೆ ಹೊರಟ ಅವರು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ.
ರಾಯಚೂರಿನಲ್ಲಿನ ಅವರ ಮನೆಗೆ ಬೀಗ ಹಾಕಿದ್ದು, ಅವರ ಕುಟುಂಬದ ಯಾರೊಬ್ಬರೂ ಮನೆಯಲ್ಲಿ ಇಲ್ಲ. ಸೋಮವಾರ ವಿಚಾರಣೆಗೆ ಹಾಜರಾಗಿ ಎಂದು ವಿಶೇಷ ತನಿಖಾ ದಳ (ಎಸ್ಐಟಿ) ಸಹ ದದ್ದಲ್ ಅವರಿಗೆ ಈ ಹಿಂದೆಯೇ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.