ADVERTISEMENT

ವಾಲ್ಮೀಕಿ, ಮುಡಾ ಹಗರಣ: ಸರ್ಕಾರದ ವಿರುದ್ಧ ತೀವ್ರ ಹೋರಾಟಕ್ಕೆ ಬಿಜೆಪಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 9:46 IST
Last Updated 11 ಜುಲೈ 2024, 9:46 IST
ಬಿಜೆಪಿ ಧ್ವಜ
ಬಿಜೆಪಿ ಧ್ವಜ   

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ವಿವಾದ ಮತ್ತು ವಾಲ್ಮೀಕಿ ನಿಗಮದ ನಿಧಿ ದುರ್ಬಳಕೆ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ. 

ನಗರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ‘ಮುಡಾ ಹಗರಣವನ್ನು ಖಂಡಿಸಿ ಶುಕ್ರವಾರ ಮೈಸೂರಿನ ಮುಡಾ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಪ್ರತಿಭಟನೆಯಲ್ಲಿ ರಾಜ್ಯಮಟ್ಟದ ನಾಯಕರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ’ ಎಂದು ಪಕ್ಷವು ತಿಳಿಸಿದೆ.

‘ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರ ಜುಲೈ 15ರಂದು ವಿಧಾನಸೌಧ ಚಲೋ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಭೆ ನಡೆಸಿ, ಅಲ್ಲಿಂದ ವಿಧಾನಸೌಧಕ್ಕೆ ಮೆರವಣಿಗೆ ನಡೆಸಲಾಗುತ್ತದೆ’ ಎಂದು ಪಕ್ಷವು ಮಾಹಿತಿ ನೀಡಿದೆ. 

ADVERTISEMENT

ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಈ ಎರಡೂ ಹಗರಣಗಳ ವಿರುದ್ಧ ನಾವು ಸದನದ ಹೊರಗೂ ಹೋರಾಟ ನಡೆಸುತ್ತೇವೆ ಮತ್ತು ಮುಂದಿನ ವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲೂ ಹೋರಾಟ ನಡೆಸುತ್ತೇವೆ. ಸಭೆಯಲ್ಲಿ ಈ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುತ್ತದೆ’ ಎಂದು ಹೇಳಿದರು.

‘ಮುಡಾ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸ್ವತಃ ಸಚಿವ ಬೈರತಿ ಸುರೇಶ್‌ ಮೈಸೂರಿನಿಂದ ಬೆಂಗಳೂರಿಗೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೇ ಹಾಗೆ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.

‘ರಾಜ್ಯದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ. ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಾದ್ಯಂತ ಡೆಂಗಿ ತೀವ್ರವಾಗಿದೆ. ಆದರೆ ಮುಖ್ಯಮಂತ್ರಿಯಾಗಲೀ, ಆರೋಗ್ಯ ಸಚಿವರಾಗಲೀ ಯಾವ ಆಸ್ಪತ್ರೆಗೂ ಭೇಟಿ ನೀಡುತ್ತಿಲ್ಲ. ಬರೀ ಕಚೇರಿಯಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲ’ ಎಂದರು.

ತಾನು ದಲಿತರ ಚಾಂಪಿಯನ್‌ ಎಂದು ಹೇಳಿಕೊಳ್ಳುತ್ತಾ ಅಧಿಕಾರಕ್ಕೆ ಬಂದ ಸಿದ್ದರಾ‌ಮಯ್ಯ ಅವರ ಸರ್ಕಾರದಲ್ಲೇ ದಲಿತರ ಹಣ ಲೂಟಿ ಮಾಡಲಾಗಿದೆ
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಸಿದ್ದರಾಮಯ್ಯ ಮುಗ್ಧರಲ್ಲ: ಶೆಟ್ಟರ್

‘ತಮ್ಮ ಜಾಗದಲ್ಲಿ ಮುಡಾ ಅಧಿಕಾರಿಗಳು ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ಸುಮ್ಮನ್ನಿದ್ದರು. ಬಡಾವಣೆ ಅಭಿವೃದ್ಧಿಯಾದ ಮೇಲೆ ಮುಡಾದ ಮೇಲೆ ತಪ್ಪು ಹೊರಿಸಿ ಅರ್ಜಿ ಕೊಟ್ಟಿದ್ದಾರೆ. ಆಮೇಲೆ ಬದಲಿ ಜಮೀನು ಕೇಳಿದ್ದಾರೆ’ ಎಂದು ಬಿಜೆಪಿ ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಜಾಗ ತಮ್ಮ ಪತ್ನಿಯದ್ದು ಎಂದು ಹೇಳಿಕೊಂಡಿದ್ದಾರೆ. ಆದರೆ ಪಹಣಿಯಲ್ಲಿ ಮುಡಾ ಹೆಸರೇ ಇದೆ. ಅದರಲ್ಲಿದ್ದ ‘ಭೂಸ್ವಾಧೀನ’ ಎಂಬುದನ್ನು ತೆಗೆಸಿಲ್ಲ. ಯಾರೂ ತಮ್ಮ ಜಾಗವನ್ನು ಸುಮ್ಮನೆ ಬಿಡುವುದಿಲ್ಲ, ಬೇಲಿ ಹಾಕುತ್ತಾರೆ ಅಥವಾ ಫಲಕವನ್ನಾದರೂ ಹಾಕುತ್ತಾರೆ. ಇವರು ಉದ್ದೇಶಪೂರ್ವಕವಾಗಿಯೇ ಸುಮ್ಮನ್ನಿದ್ದರು’ ಎಂದರು.

‘ಹೀಗಾಗಿ ಸಿದ್ದರಾಮಯ್ಯ ಅವರು ಹೇಳುತ್ತಿರುವಂತೆ ಅವರು ಮುಗ್ಧರಲ್ಲ. ಅವರು ಮುಗ್ಧರಿದ್ದರೂ, ಅವರ ಹಿಂಬಾಲಕರಂತೂ ಮುಗ್ಧರಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.