ADVERTISEMENT

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 17:57 IST
Last Updated 12 ಜುಲೈ 2024, 17:57 IST
ಬಿ. ನಾಗೇಂದ್ರ
ಬಿ. ನಾಗೇಂದ್ರ   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ₹94 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಬಂಧಿಸಿದೆ.

ಪ್ರಕರಣದ ತನಿಖೆ ಆರಂಭಿಸಿದ್ದ ಇ.ಡಿ ಅಧಿಕಾರಿಗಳು, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ, ನಿಗಮದ ಅಧ್ಯಕ್ಷರೂ ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ ಮನೆಗಳೂ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದ್ದರು. ಎರಡು ದಿನಗಳ ಸತತ ಶೋಧ ನಡೆಸಿದ್ದ ತನಿಖಾ ತಂಡ, ಇಬ್ಬರಿಗೂ ಮನೆಯಲ್ಲೇ ದಿಗ್ಬಂಧನ ವಿಧಿಸಿತ್ತು.

ADVERTISEMENT

ಸದಾಶಿವನಗರದ ಡಾಲರ್ಸ್‌ ಕಾಲೊನಿಯ ಮನೆಯಲ್ಲಿದ್ದ ನಾಗೇಂದ್ರ ಅವರನ್ನು ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ವಶಕ್ಕೆ ಪಡೆದ ಇ.ಡಿ ಅಧಿಕಾರಿಗಳು ಶಾಂತಿನಗರದಲ್ಲಿರುವ ತನಿಖಾ ಸಂಸ್ಥೆಯ ಕಚೇರಿಗೆ ಕರೆ ತಂದರು. ಇಡೀ ದಿನ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳ ತಂಡ, ಹಗರಣದ ಕುರಿತು ಮಾಜಿ ಸಚಿವರಿಂದ ಹಲವು ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸಿತು. ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಅವರನ್ನು ಬಂಧಿಸಲಾಯಿತು.

ಬಂಧನದ ಬಳಿಕ ನಾಗೇಂದ್ರ ಅವರನ್ನು ನಗರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಲಾಯಿತು. ಆ ಬಳಿಕ ಅವರನ್ನು ಕೋರಮಂಗಲದ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ ಕಾಂಪ್ಲೆಕ್ಸ್‌ ನಲ್ಲಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ಇ.ಡಿಯಿಂದ ಮೊದಲ ಬಂಧನ: ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆಯ ಶಾಖೆಯಲ್ಲಿ ತೆರೆದಿದ್ದ ನಿಗಮದ ಖಾತೆಯಿಂದ ₹94.73 ಕೋಟಿಯನ್ನು ಅಕ್ರಮ ವರ್ಗಾವಣೆ ಮಾಡಲಾಗಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕ ಅಧೀಕ್ಷಕ ಪಿ. ಚಂದ್ರ ಶೇಖರನ್‌, ಈ ಕುರಿತು ಹಲವರ ವಿರುದ್ಧ ಆರೋಪಗಳಿರುವ ಮರಣ ಪತ್ರ ಬರೆದಿಟ್ಟು ಶಿವಮೊಗ್ಗದ ತಮ್ಮ ಮನೆಯಲ್ಲಿ ಮೇ 26ರಂದು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದರು. ಆ ಬಳಿಕ ಹಗರಣ ಬಯಲಿಗೆ ಬಂದಿತ್ತು. ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಒಂದು ಎಫ್‌ಐಆರ್‌ ದಾಖಲಾಗಿದ್ದರೆ, ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ನಗರದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಮೇ 29ರಂದು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಯೂನಿಯನ್‌ ಬ್ಯಾಂಕ್‌ ಅಧಿಕಾರಿಗಳ ದೂರು ಆಧರಿಸಿ ಸಿಬಿಐ ಕೂಡ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.

ಮೂರನೇ ಬಾರಿ ಬಂಧನ

ಬೇಲೇಕೇರಿ ಬಂದರಿನಲ್ಲಿ ಲೋಕಾಯುಕ್ತ ತನಿಖಾ ತಂಡ ವಶಕ್ಕೆ ಪಡೆದಿದ್ದ ಕಬ್ಬಿಣದ ಅದಿರಿನ ಕಳ್ಳಸಾಗಣೆ ಪ್ರಕರಣದಲ್ಲಿ, ಆಗ ಶಾಸಕರಾಗಿದ್ದ ನಾಗೇಂದ್ರ ಅವರನ್ನು ಸಿಬಿಐ 2014ರಲ್ಲಿ ಬಂಧಿಸಿತ್ತು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಲೋಕಾಯುಕ್ತದ ಎಸ್‌ಐಟಿ 2015ರಲ್ಲಿ ಬಂಧಿಸಿತ್ತು. ಈಗ ಮೂರನೇ ಬಾರಿ ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಾಗೇಂದ್ರ ಬಂಧಿತರಾಗಿದ್ದಾರೆ.

ಎಂ.ಡಿ ಹೇಳಿಕೆಯೇ ಪ್ರಬಲ ಸಾಕ್ಷ್ಯ

‘ಯೂನಿಯನ್‌ ಬ್ಯಾಂಕ್‌ನ ವಸಂತನಗರ ಶಾಖೆಯಲ್ಲಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯನ್ನು ಎಂ.ಜಿ. ರಸ್ತೆ ಶಾಖೆಗೆ ವರ್ಗಾಯಿಸಿ, ತಾವು ಸೂಚಿಸಿದ್ದ ವ್ಯಕ್ತಿಗೆ ಖಾತೆ ನಿರ್ವಹಣೆ ಅಧಿಕಾರ ನೀಡುವಂತೆ ಸಚಿವರಾಗಿದ್ದ ಬಿ.ನಾಗೇಂದ್ರ ಒತ್ತಡ ಹೇರಿದ್ದರು’ ಎಂದು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಬಿ. ಪದ್ಮನಾಭ ಅವರು ವಿಶೇಷ ತನಿಖಾ ದಳದ (ಎಸ್‌ಐಟಿ) ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು.

ಪದ್ಮನಾಭ, ನಿಗಮದ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ ದುರ್ಗಣ್ಣನವರ ಸೇರಿದಂತೆ 11 ಆರೋಪಿಗಳನ್ನು ಎಸ್‌ಐಟಿ ಈವರೆಗೆ ಬಂಧಿಸಿದೆ. ಈ ಪೈಕಿ ಪದ್ಮನಾಭ ಮತ್ತು ಪರಶುರಾಮ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯಲ್ಲೇ ವಶಕ್ಕೆ ಪಡೆದಿದ್ದ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆಗಲೂ, ಪದ್ಮನಾಭ ಅವರು ನಾಗೇಂದ್ರ ಒತ್ತಡ ಹೇರಿದ್ದ ಕುರಿತು ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿ ತನಿಖೆ ಮುಂದುವರಿಸಿದ್ದು, ಪ್ರಬಲ ಸಾಕ್ಷ್ಯಾಧಾರಗಳು ಲಭಿಸಿದ ಬಳಿಕ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿಸುವಂತೆ ದದ್ದಲ್‌ ದುಂಬಾಲು

‌ಬೆಂಗಳೂರು: ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಸನಗೌಡ ದದ್ದಲ್‌ ಅವರು ಶುಕ್ರವಾರ ವಿಶೇಷ ತನಿಖಾ ದಳದ (ಎಸ್‌ಐಟಿ) ಎದುರು ದಿಢೀರ್‌ ಹಾಜರಾಗಿ ‘ತಮ್ಮನ್ನು ಬಂಧಿಸಿ’ ಎಂದು ದುಂಬಾಲು ಬಿದ್ದ ಪ್ರಸಂಗ ನಡೆದಿದೆ.

ಗುರುವಾರ ಎರಡನೇ ಬಾರಿಗೆ ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಎಸ್‌ಐಟಿ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ದಾಳಿಯಿಂದ ಅವರು ವಿಚಾರಣೆಗೆ ಗೈರಾಗಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಸಿಐಡಿ ಕಚೇರಿಗೆ ಅವರು ಬಂದಿದ್ದರು.

ಅತ್ತ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರನ್ನು ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರೆ, ಇತ್ತ ಎಸ್‌ಐಟಿ ಎದುರು ದದ್ದಲ್‌ ಪ್ರತ್ಯಕ್ಷರಾಗಿದ್ದರು.

ಸಿಐಡಿ ಕಚೇರಿಗೆ ಬಂದ ಅವರು, ‘ಇ.ಡಿ ಅಧಿಕಾರಿಗಳು ಬಂಧಿಸಿದರೆ ಕಷ್ಟವಾಗುತ್ತದೆ. ಕುಟುಂಬದ ಸದಸ್ಯರಿಗೂ ಕಾನೂನು ಸಂಕಷ್ಟ ಎದುರಾಗಲಿದೆ. ದಯವಿಟ್ಟು ನೀವೇ ನನ್ನನ್ನು ಬಂಧಿಸಿ, ಇ.ಡಿ ಸಂಕಷ್ಟದಿಂದ ಪಾರು ಮಾಡಿ’ ಎಂದು ತನಿಖಾಧಿಕಾರಿಗಳ ಎದುರು ಪರಿಪರಿಯಾಗಿ ಬೇಡಿಕೊಂಡರು’ ಎಂದು ಮೂಲಗಳು ಹೇಳಿವೆ.

ಆದರೆ, ದದ್ದಲ್‍ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ನಿರಾಕರಿಸಿದರು. ‘ನಾವು ಬಂಧಿಸಿದರೂ ಇ.ಡಿ ಅಧಿಕಾರಿಗಳು ಬಾಡಿ ವಾರಂಟ್ ಮೇಲೆ ನಿಮ್ಮನ್ನು ವಶಕ್ಕೆ ಪಡೆಯುತ್ತಾರೆ. ಆಗ ಮತ್ತಷ್ಟು ಸಮಸ್ಯೆ ಆಗಲಿದೆಯೆಂದು ಹೇಳಿ ವಿಚಾರಣೆ ನಡೆಸಿ ಕಳುಹಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

8 ತಾಸು ವಿಚಾರಣೆ:

ಅದಾದ ಮೇಲೆ ಬೆಳಿಗ್ಗೆ 10.30ರಿಂದ ಸಂಜೆ 6.30ರ ವರೆಗೆ ದದ್ದಲ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಎಂಟು ತಾಸು ವಿಚಾರಣೆ ನಡೆಸಿದರು.

‘ದದ್ದಲ್‌ ಅವರ ಆಪ್ತ ಸಹಾಯಕ ಪಂಪಣ್ಣಗೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಅವರು ಎರಡು ಹಂತದಲ್ಲಿ ₹55 ಲಕ್ಷ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಅದನ್ನು ಆಧರಿಸಿ ಕೆಲವು ಪ್ರಶ್ನೆ ಕೇಳಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಅಲ್ಲದೇ ಅಕ್ರಮದಲ್ಲಿ ದದ್ದಲ್‌ ಅವರ ಪಾತ್ರದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.‌

ರಿಯಲ್‌ ಎಸ್ಟೇಟ್‌ನಲ್ಲಿ ಹಣ ಹೂಡಿಕೆ?

‘ಅಕ್ರಮದಿಂದ ಬಂದ ಹಣವನ್ನು ಬಸನಗೌಡ ದದ್ದಲ್ ಅವರು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಆ ದಿಕ್ಕಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್ಐಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ರಾಯಚೂರು ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಾರ್ಗದಲ್ಲಿ ಜಮೀನು ಖರೀದಿಸಿರುವ ಮಾಹಿತಿ ಸಿಕ್ಕಿದೆ. ದದ್ದಲ್‍ ಅವರ ಪುತ್ರ ತ್ರಿಶೂಲ್‍ಕುಮಾರ್ ನಾಯಕ್ ಮತ್ತು ಕುಟುಂಬ ಸದಸ್ಯರು ಸೇರಿದಂತೆ ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿಸಲಾಗಿದೆ ಎಂಬ ಮಾಹಿತಿಯಿದೆ’ ಎಂದು ಮೂಲಗಳು ಹೇಳಿವೆ.

‘ಸಿರವಾರ ಗಣದನ್ನಿ ಗ್ರಾಮದಲ್ಲಿ ಜೂನ್‌ 6ರಂದು 4 ಎಕರೆ 31 ಗುಂಟೆ ಜಮೀನು ಕ್ರಯ ಮಾಡಲಾಗಿದೆ ಎಂಬುದು ಪಹಣಿಯಲ್ಲಿ ನಮೂದಾಗಿದೆ. ಸಿದ್ದಪ್ಪಗೌಡ, ವೆಂಕಟರೆಡ್ಡಿ ಎಂಬವರಿಂದ ಈ ಜಮೀನು ಖರೀದಿಸಲಾಗಿದೆ. ತ್ರಿಶೂಲ್‌ಕುಮಾರ್‌ ನಾಯಕ್‌ ಬಿನ್‌ ಬಸನಗೌಡ ಹೆಸರಿನಲ್ಲಿ ಪಹಣಿಯಿದೆ. ಆ ಜಮೀನು ಯಾರದ್ದು? ಜಮೀನು ಖರೀದಿಸಿದ್ದರೆ, ಯಾವ ಹಣ ಬಳಸಲಾಗಿದೆ ಎಂಬುದರ ಕುರಿತೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಎಸ್‌ಐಟಿ ಪೊಲೀಸರು ಹೇಳಿದರು. ‘ದದ್ದಲ್ ಅವರ‌ ಕುಟುಂಬದ ಇತರೆ ಸದಸ್ಯರು, ಅಳಿಯ ಹಾಗೂ ಪತ್ನಿಯ ಸಂಬಂಧಿಕರ ಹೆಸರಿನಲ್ಲೂ ಬೇನಾಮಿಯಾಗಿ ಜಮೀನು ಖರೀದಿಸಿರುವ ಮಾಹಿತಿ ಇದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.