ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಪಕ್ಷದ ವತಿಯಿಂದ ಗುರುವಾರ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು.
ರಾಜಭವನಕ್ಕೆ ತೆರಳುವುದಕ್ಕೂ ಮೊದಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಪಕ್ಷದ ನಾಯಕರ ಸಭೆ ಕರೆಯಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯಪಾಲರು ಸಂವಿಧಾನಾತ್ಮಕ ಅಧಿಕಾರವನ್ನು ಬಳಸಿ ಸಚಿವ ನಾಗೇಂದ್ರ ಅವರನ್ನು ವಜಾ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ. ಅಲ್ಲದೇ, ಮುಂದಿನ ಹೋರಾಟದ ರೂಪುರೇಷೆಯನ್ನೂ ತೀರ್ಮಾನಿಸುತ್ತೇವೆ. ತಾರ್ಕಿಕ ಅಂತ್ಯವನ್ನು ಮುಟ್ಟಿಸದೇ ವಿರಮಿಸುವ ಪ್ರಶ್ನೆಯೇ ಇಲ್ಲ. ₹187 ಕೋಟಿ ವಾಪಸ್ ತರದೇ ಬಿಡುವುದೂ ಇಲ್ಲ ಎಂದು ರಾಜೀವ್ ಹೇಳಿದರು.
ಬ್ಯಾಂಕಿನ ದೂರಿನ ಕಾರಣ ಸಿಬಿಐ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದೆ. ಇದು ಸರ್ಕಾರದ ಕಪಾಳಕ್ಕೆ ಹೊಡೆದ ಹಾಗೆ ಆಗಿದೆ. ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿತ್ತು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.