ADVERTISEMENT

ವಾಲ್ಮೀಕಿ ನಿಗಮ ಹಗರಣ | ಶಾಸಕರಿಗೆ ಎಸ್‌ಐಟಿ ಪ್ರಶ್ನಾ ಈಟಿ

ನಾಗೇಂದ್ರ, ದದ್ದಲ್‌ಗೆ ಇಂದು ಮತ್ತೆ ಹಾಜರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 22:57 IST
Last Updated 9 ಜುಲೈ 2024, 22:57 IST
ಬಿ.ನಾಗೇಂದ್ರ
ಬಿ.ನಾಗೇಂದ್ರ   

ಬೆಂಗಳೂರು: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹94.97 ಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು, ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರನ್ನು ಮಂಗಳವಾರ ತೀವ್ರ ವಿಚಾರಣೆಗೆ ಒಳಪಡಿಸಿದರು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ನಿಗಮ ಹೊಂದಿದ್ದ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ಎಸ್‌ಐಟಿ ಈವರೆಗೆ 11 ಮಂದಿಯನ್ನು ಬಂಧಿಸಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಹಾಗೂ ಶಾಸಕರೂ ಆಗಿರುವ ಬಸನಗೌಡ ದದ್ದಲ್‌ ಕೂಡ ಹಗರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಇಬ್ಬರನ್ನೂ ಸುದೀರ್ಘಕಾಲ ವಿಚಾರಣೆ ನಡೆಸಲಾಗಿದೆ.

ಹಣ ವರ್ಗಾವಣೆ ಪ್ರಕರಣದಲ್ಲಿ ಇಬ್ಬರ ಪಾತ್ರದ ಕುರಿತು ವಿಚಾರಣೆ ನಡೆಸಲು ಜುಲೈ 5ರಂದು ನೋಟಿಸ್‌ ಜಾರಿಗೊಳಿಸಿದ್ದ ಎಸ್‌ಐಟಿ, ಖುದ್ದು ವಿಚಾರಣೆಗೆ ಬರುವಂತೆ ಸೂಚಿಸಿತ್ತು. ವಿಚಾರಣೆ ವೇಳೆ, ಹಗರಣದ ಸಂಬಂಧ ತನಿಖಾಧಿಕಾರಿಗಳು ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

‘ಬೆಳಿಗ್ಗೆ 11ರ ಸುಮಾರಿಗೆ ಸಿಐಡಿ ಕಚೇರಿಗೆ ಬಂದ ಬಿ.ನಾಗೇಂದ್ರ ಅವರನ್ನು ಸಂಜೆ 5 ಗಂಟೆವರೆಗೆ ಆರು ತಾಸು ವಿಚಾರಣೆ ನಡೆಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಬಂದ ದದ್ದಲ್‌ ಅವರನ್ನು ಸಂಜೆ 6ರವರೆಗೆ ಮೂರು ತಾಸು ವಿಚಾರಣೆ ನಡೆಸಲಾಗಿದೆ. ಎಸ್ಐಟಿ ಮುಖ್ಯಸ್ಥ ಮನೀಶ್ ಖರ್ಬೀಕರ್‌ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ತನಿಖಾಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡರು. ಇಬ್ಬರ ಹೇಳಿಕೆಯನ್ನೂ ವಿಡಿಯೊ ರೆಕಾರ್ಡ್ ಮಾಡಲಾಗಿದೆ. ಬುಧವಾರ ಮತ್ತೆ ವಿಚಾರಣೆಗೆ ಬರುವಂತೆ ಇಬ್ಬರಿಗೂ ಸೂಚಿಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.

ಸುದೀರ್ಘ ವಿಚಾರಣೆ:

‘ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ನೆಕ್ಕಂಟಿ ನಾಗರಾಜ್‌ ಹಾಗೂ ಅವರ ಸಂಬಂಧಿ ನಾಗೇಶ್ವರ ರಾವ್‌ ಅವರು ನಿಮಗೆ ಹೇಗೆ ಪರಿಚಯ? ನೆಕ್ಕಂಟಿ ನಾಗರಾಜ್‌ ಅವರು ನಿಮ್ಮ ಆಪ್ತರೇ? ಹಣ ವರ್ಗಾವಣೆಯ ಮಾಹಿತಿಯನ್ನು ನಿಮಗೆ ನೀಡಲಾಗಿತ್ತೇ’ ಎಂಬ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದರು. ಬಂಧಿತರು ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ನಾಗೇಂದ್ರ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಲಾಯಿತು. ಕೆಲವು ಪ್ರಶ್ನೆ ಕೇಳಿದಾಗ ನಾಗೇಂದ್ರ ಅವರು ಮೌನವಾಗಿದ್ದರು. ಮತ್ತೆ ಕೆಲವು ಪ್ರಶ್ನೆಗಳಿಗೆ, ‘ನನಗೆ ಗೊತ್ತಿಲ್ಲ, ಮಾಹಿತಿ ಇಲ್ಲ’ ಎಂಬುದಾಗಿ ಉತ್ತರಿಸಿದ್ದಾರೆ’ ಎಂದು ಗೊತ್ತಾಗಿದೆ.‌

ಆಡಿಯೊ ಹಾಗೂ ವಿಡಿಯೊ ಸಾಕ್ಷ್ಯಗಳನ್ನೂ ತೋರಿಸಿ ಅವರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ಹೇಳಿವೆ.

‘ದದ್ದಲ್‌ ಅವರಿಗೆ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದೇ ಸಮಯಕ್ಕೆ ಬಂದ ಅವರಿಗೂ ಹಲವು ಪ್ರಶ್ನೆ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತರಾಗಿರುವ ನಿಗಮದ ಇಬ್ಬರು ಅಧಿಕಾರಿಗಳು ದದ್ದಲ್‌ ಹೆಸರು ಪ್ರಸ್ತಾಪಿಸಿರುವ ಬಗ್ಗೆಯೂ ಪ್ರಶ್ನೆ ಕೇಳಲಾಯಿತು. ವಾಟ್ಸ್‌ಆ್ಯಪ್‌ ಚಾಟಿಂಗ್‌ ಅನ್ನು ಅವರ ಮುಂದಿಡಲಾಯಿತು’ ಎಂದು ಮೂಲಗಳು ಹೇಳಿವೆ.

ನಿಗಮದ ಖಾತೆಯಿಂದ ₹94.97 ಕೋಟಿ ಹಣ ಅಕ್ರಮವಾಗಿ ಹೈದರಾಬಾದ್‌ನ ‘ಫಸ್ಟ್‌ ಫೈನಾನ್ಸ್ ಕ್ರೆಡಿಟ್ ಕೋ– ಆಪರೇಟಿವ್‌ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್‌) ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಆಗಿತ್ತು. ಅಲ್ಲಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಆರೋಪಿಗಳು ಡ್ರಾ ಮಾಡಿಕೊಂಡಿದ್ದರು. ನಗರದ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದ್ದು, ಹೈದರಾಬಾದ್ ಹಾಗೂ ಬೆಂಗಳೂರಿನ 11 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಡ್ರಾ ಮಾಡಿಕೊಂಡಿದ್ದ ಹಣ ಹಾಗೂ ಖರೀದಿಸಿದ್ದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.

ದದ್ದಲ್‌ 

ಬಂಧಿತರ ಆಡಿಯೊ

ಸಂಭಾಷಣೆ: ತನಿಖೆ ಚುರುಕು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಬಿ.ಪದ್ಮನಾಭ ಹಾಗೂ ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ ಮಧ್ಯೆ ಮೇ 24ರಂದು ನಡೆದಿದೆ ಎನ್ನಲಾದ ಮೊಬೈಲ್‌ ಸಂಭಾಷಣೆಯ ಆಡಿಯೊ ತುಣುಕು ತನಿಖಾ ತಂಡಕ್ಕೆ ಲಭಿಸಿದ್ದು ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ‘ಬ್ಯಾಂಕ್‌ನವರ ವಿರುದ್ಧ ಕೇಸ್‌ ಮಾಡ್ತೀವಲ್ಲ ನಮಗೆ ಹಣ ಕೊಡ್ತಾರಾ ಅವ್ರು ’ ಎಂಬ ಮಾತು ಆಡಿಯೊದಲ್ಲಿದೆ. ಮತ್ತೊಬ್ಬರು ‘ಅಧ್ಯಕ್ಷರಿಗೆ ಹೇಳೋದು ಬೇಡ್ವಾ’ ಎನ್ನುತ್ತಾರೆ. ‘ಅಧ್ಯಕ್ಷರ ಗಮನಕ್ಕೆ ತರಬೇಕು. ಗಮನಕ್ಕೆ ತಂದರೆ ದೊಡ್ಡ ರಾದ್ಧಾಂತ ಆಗುತ್ತದೆ’ ಎಂದು ಇನ್ನೊಬ್ಬರು ಹೇಳುತ್ತಾರೆ. ಆಗ ‘ಸೋಮವಾರ ಮಂಗಳವಾರ ಬುಧವಾರ ಬಿಡೋಣ. ಇವತ್ತು ಒಂದು ದಿನ ಅವರನ್ನು ಮ್ಯಾನೇಜ್ ಮಾಡಿ ಕಳಿಸಿ’ ಎಂದು ಇಬ್ಬರು ಮಾತನಾಡಿಕೊಂಡಿರುವುದು ದಾಖಲಾಗಿದೆ. ಈ ಆಡಿಯೊ ತುಣುಕನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್‌) ಕಳುಹಿಸಲಾಗಿದೆ ಎಂದು ಎಸ್ಐಟಿ ಅಧಿಕಾರಿಯೊಬ್ಬರು ಹೇಳಿದರು.

‘ಎರಡೂ ಆಯಾಮದಲ್ಲೂ ತನಿಖೆ’

‘ಹಗರಣದ ತನಿಖೆಯನ್ನು ಎಸ್‌ಐಟಿ ಹಾಗೂ ಸಿಬಿಐ ಬೇರೆ ಬೇರೆ ಆಯಾಮಗಳಲ್ಲಿ ನಡೆಸುತ್ತಿವೆ. ಸಿಬಿಐ ಅಧಿಕಾರಿಗಳು ನಿಗಮದ ಹಣಕಾಸಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಡಿಸಿಸಿ ಮತ್ತು ಸಹಕಾರ ಸಂಘಗಳ ದಾಖಲಾತಿ ಪರಿಶೀಲಿಸುತ್ತಿದ್ದಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು. ‘ತನಿಖೆಯ ಬಗ್ಗೆ ಬಿಜೆಪಿ ಮುಖಂಡರು ಸುಮ್ಮನೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.