ADVERTISEMENT

ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಖರ್ಚು: ಆರೋಪ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 13:27 IST
Last Updated 16 ಜುಲೈ 2024, 13:27 IST
ಸಚಿವ ಬಿ.ನಾಗೇಂದ್ರ
ಸಚಿವ ಬಿ.ನಾಗೇಂದ್ರ   

ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಮತ್ತು ಈ ಹಣ ಲೋಕಸಭೆ ಚುನಾವಣೆಗೆ ಖರ್ಚಾಗಿದೆ ಎಂಬಂತಹ ಮಾಹಿತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಡೀ ಪ್ರಪಂಚಕ್ಕೇ ಗೊತ್ತಾಗುವಂತೆ ಡಂಗುರ ಹೊಡೆದಿದ್ದಾರೆ’ ಎಂದು ಪ್ರಕರಣದ ಆರೋಪಿಯಾದ ಮಾಜಿ ಸಚಿವ ಬಿ.ನಾಗೇಂದ್ರ ಪರ ಹಿರಿಯ ವಕೀಲರು ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಆರೋಪಿಸಿದರು.

ಸದ್ಯ ಜಾರಿ ನಿರ್ದೇಶನಾಲಯದ (ಇ–ಡಿ) ವಶದಲ್ಲಿರುವ ನಾಗೇಂದ್ರ, ‘ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನ ವಕೀಲರ ಜೊತೆ ಖಾಸಗಿಯಾಗಿ ಮಾತನಾಡಲು ಅವಕಾಶ ನೀಡುತ್ತಿಲ್ಲ’ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಮಂಗಳವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ನಾಗೇಂದ್ರ ಪರ ಹಾಜರಾಗಿದ್ದ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಎಸ್.ಶ್ಯಾಮಸುಂದರ್‌, ‘ಇ–ಡಿ ಅಧಿಕಾರಿಗಳು ಅರ್ಜಿದಾರರ ಮೂರು ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ ಅವರ ಕುಟುಂಬದ ಮತ್ತು ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದ ಖಾಸಗಿ ವಿಷಯಗಳು ಅಡಕವಾಗಿವೆ. ಇವುಗಳನ್ನೆಲ್ಲಾ ಅಧಿಕಾರಿಗಳು ತನಿಖೆಯ ನೆಪದಲ್ಲಿ ಒಳಹೊಕ್ಕು ಬಗೆಯುತ್ತಿರುವುದು ಕಾನೂನುಬಾಹಿರ. ಅಷ್ಟೇ ಅಲ್ಲ ಪ್ರತಿಯೊಂದು ಮಾಹಿತಿಯನ್ನೂ ಮಾಧ್ಯಮಗಳಿಗೆ ಮುದ್ದಾಂ ನೀಡುತ್ತಿದ್ದಾರೆ’ ಎಂದು ದೂಷಿಸಿದರು.

ADVERTISEMENT

‘ನಾಗೇಂದ್ರ ಅವರಿಗೆ ಹೃದಯ ಸಂಬಂಧಿ ಮತ್ತು ಚರ್ಮರೋಗವಿದೆ. ಅಂತೆಯೇ, ಅವರು ತಮ್ಮ ವಕೀಲರ ಜೊತೆ ಖಾಸಗಿಯಾಗಿ ಮಾತನಾಡಲು ಅವಕಾಶ ನೀಡಬೇಕು. ತನಿಖಾಧಿಕಾರಿಗಳು ಅವರಿಂದ ಪಡೆಯುವ ಹೇಳಿಕೆ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡಿಂಗ್‌ ಮಾಡಲು ನಿರ್ದೇಶಿಸಬೇಕು’ ಎಂದು ಕೋರಿದರು.

ಈ ವಾದಕ್ಕೆ ತೀವ್ರವಾಗಿ ಪ್ರತಿ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್, ‘ಅರ್ಜಿಯನ್ನು ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ಅಡಿಯಲ್ಲಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ದಂಡ ಪ್ರಕ್ರಿಯಾ ಸಂಹಿತೆ ಕಾನೂನಿನ ಅಡಿಯಲ್ಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನಿಖಾಧಿಕಾರಿಗಳು ಕಾನೂನು ಚೌಕಟ್ಟು ಬಿಟ್ಟು ವರ್ತಿಸುತ್ತಿಲ್ಲ. ಅಂತೆಯೇ, ಆರೋಪಿಯು ತಮಗೆ ಚರ್ಮರೋಗ ಇದೆ ಎಂಬುದನ್ನು ನಮಗೆಲ್ಲೂ ತಿಳಿಸಿಲ್ಲ’ ಎಂದರು.

‘ಆರೋಪಿಗೆ ಸರ್ಕಾರಿ ವೈದ್ಯರು ಚಿಕಿತ್ಸೆ ನೀಡುವುದು ಬೇಡ ಎಂದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದ ಪ್ರಸನ್ನಕುಮಾರ್, ‘ಪರಪ್ಪನ ಅಗ್ರಹಾರದಲ್ಲಿ 3,500ರಷ್ಟು ಕೈದಿಗಳಿದ್ದಾರೆ. ಅವರೆಲ್ಲರೂ ಇದೇ ರೀತಿಯ ಅರ್ಜಿಗಳನ್ನು ಹಾಕಿಕೊಂಡು ನ್ಯಾಯಾಲಯಕ್ಕೆ ಬಂದರೆ ಹೇಗೆ? ಇಂತಹ ಅರ್ಜಿಗಳೆಲ್ಲಾ ವಿಲಾಸಿ ಆರೋಪಿಗಳ ಅರ್ಜಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮಧ್ಯಂತರ ಅರ್ಜಿ ಮೇಲಿನ ಆದೇಶವನ್ನು ಇದೇ 18ರಂದು ಪ್ರಕಟಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.