ADVERTISEMENT

'ವಂದೇ ಭಾರತ್' ಎಕ್ಸ್‌ಪ್ರೆಸ್ ಪ್ರಧಾನಿ ಮೋದಿಯ ಆತ್ಮನಿರ್ಭರ ರೈಲು ಎಂದ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 7:52 IST
Last Updated 27 ಜೂನ್ 2023, 7:52 IST
 'ವಂದೇ ಭಾರತ್' ಎಕ್ಸ್ ಪ್ರೆಸ್
'ವಂದೇ ಭಾರತ್' ಎಕ್ಸ್ ಪ್ರೆಸ್    

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮೂಲಕ 'ವಂದೇ ಭಾರತ್' ಎಕ್ಸ್‌ಪ್ರೆಸ್ ರೈಲಿಗೆ ಮಂಗಳವಾರ ಚಾಲನೆ ನೀಡಿದರು.

ಇದಕ್ಕೆ ಪೂರಕವಾಗಿ ಧಾರವಾಡ ರೈಲು ನಿಲ್ದಾಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ವದೇಶಿ ನಿರ್ಮಿತ ರೈಲು. ಪ್ರಧಾನಿ ಮೋದಿ ಅವರ ಆತ್ಮನಿರ್ಭರ ರೈಲು ಕೂಡ ಹೌದು. ಸೆಮಿ ಹೈಸ್ಪೀಡ್ ರೈಲು ಸಂಚಾರ ಆರಂಭಿಸಬೇಕು ಎಂಬ ಹುಬ್ಬಳ್ಳಿ–ಧಾರವಾಡ ಜನರ ಬಹುದಿನಗಳ ಬೇಡಿಕೆ ಈಗ ಈಡೇರಿದೆ’ ಎಂದರು.

‘ಸದ್ಯದ ವೇಳಾಪಟ್ಟಿಯಂತೆ ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನದ ವೇಳೆಗೆ ಧಾರವಾಡ ತಲುಪುವುದು. ಮತ್ತೆ ಅಲ್ಲಿಂದ ಹೊರಟು ರಾತ್ರಿ ಬೆಂಗಳೂರಿಗೆ ತಲುಪುವುದು. ರೈಲು ಬೆಳಿಗ್ಗೆ ಧಾರವಾಡದಿಂದ ಹೊರಡುವಂತೆ ವೇಳಾಪಟ್ಟಿ ಬದಲಿಸುವಂತೆ ಪ್ರಯಾಣಿಕರು ಕೋರಿದ್ದಾರೆ. ಈ ರೈಲಿನ ನಿರ್ವಹಣೆ ಘಟಕ ಬೆಂಗಳೂರಿನಲ್ಲಿ ಮಾತ್ರ ಇದೆ. ಹೀಗಾಗಿ ಕೆಲ ತಿಂಗಳು ಇದೇ ವೇಳಾಪಟ್ಟಿ ಇರಲಿದೆ’ ಎಂದರು.

ADVERTISEMENT

‘ಹುಬ್ಬಳ್ಳಿಯಲ್ಲೂ ಈ ರೈಲಿನ ನಿರ್ವಹಣೆ ವ್ಯವಸ್ಥೆಗೆ ಟೆಂಡರ್‌ ಆಹ್ವಾನಿಸಲಾಗಿದೆ. ಘಟಕ ಸಜ್ಜುಗೊಂಡ ಬಳಿಕ ಧಾರವಾಡದಿಂದ ಬೆಳಿಗ್ಗೆ ರೈಲು ಹೊರಡುವಂತೆ ವೇಳಾಪಟ್ಟಿ ಬದಲಾಯಿಸಲು ಪ್ರಯತ್ನಿಸಲಾಗುವುದು’ ಎಂದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಧಾರವಾಡದಿಂದ ಹುಬ್ಬಳ್ಳಿ ರೈಲು ನಿಲ್ದಾಣದವರೆಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸಿದರು. ರೈಲ್ವೆ ಅಧಿಕಾರಿಗಳು, ವಿಶೇಷ ಆಹ್ವಾನಿತರು ಇದ್ದರು.

ಧಾರವಾಡ ನಿಲ್ದಾಣದಿಂದ ಬೆಳಿಗ್ಗೆ 10.53 ಹೊರಟ ರೈಲು 11.18ಕ್ಕೆ ಹುಬ್ಬಳ್ಳಿ ನಿಲ್ದಾಣ ತಲುಪಿತು. ನಂತರ ಮಧ್ಯಾಹ್ನ 1.57ಕ್ಕೆ ದಾವಣಗೆರೆ, ಸಂಜೆ 7.22ಕ್ಕೆ ಯಶವಂತಪುರ ಮತ್ತು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣವನ್ನು 7.27ಕ್ಕೆ ತಲುಪಿತು.

8 ಬೋಗಿ, 530 ಆಸನ ಸಾಮರ್ಥ್ಯ

ರೈಲಿನಲ್ಲಿ 8 ಬೋಗಿಗಳಿದ್ದು, 530 ಆಸನಗಳಿವೆ. ಎಕ್ಸಿಕ್ಯೂಟಿವ್‌ ಬೋಗಿಯಲ್ಲಿ ತಿರುಗುವ (ರಿವಾಲ್ವಿಂಗ್‌) ಆಸನಗಳಿವೆ. ರೈಲಿನ ಎರಡೂ ತುದಿಗಳಲ್ಲಿ ಎಂಜಿನ್‌ ಕೋಚ್‌ಗಳು ಇವೆ. ಬ್ರೈಲ್‌ ಅಕ್ಷರಗಳಲ್ಲಿ ಆಸನ ಸಂಖ್ಯೆ ಇರುವ ಆಸನ ಹಿಡಿಕೆಗಳು ಇವೆ. ಗಂಟೆಗೆ 110 ಕಿ.ಮೀ ವೇಗ ಸಾಮರ್ಥ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.