ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಇವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿರುವ ನಾಲ್ಕನೇ ಮಹಿಳೆ.
1986ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ವಂದಿತಾ, ರಾಜ್ಯ ಸರ್ಕಾರದ 39ನೇ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. 2023ರ ನವೆಂಬರ್ 30ರವರೆಗೂ ಅವರ ಅಧಿಕಾರದ ಅವಧಿ ಇದೆ.
2000ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು. 2006ರಲ್ಲಿ ಮಾಲತಿ ದಾಸ್ ಮತ್ತು 2017ರಲ್ಲಿ ಕೆ. ರತ್ನಪ್ರಭಾ ಮುಖ್ಯ ಕಾರ್ಯದರ್ಶಿಯಾಗಿದ್ದರು. ರತ್ನಪ್ರಭಾ ಅವರ ಅವಧಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ನೀಲಮಣಿ ಎನ್. ರಾಜು) ಹುದ್ದೆಗಳಲ್ಲಿ ಮಹಿಳೆಯರೇ ಇದ್ದರು.
ಈಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ, ವಿಧಾನಸಭೆಯ ಕಾರ್ಯದರ್ಶಿ (ಎಂ.ಕೆ. ವಿಶಾಲಾಕ್ಷಿ), ವಿಧಾನ ಪರಿಷತ್‌ನ ಕಾರ್ಯದರ್ಶಿ (ಕೆ.ಆರ್. ಮಹಾಲಕ್ಷ್ಮಿ) ಮೂವರೂ ಮಹಿಳೆಯರೇ ಆಗಿರುವುದು ವಿಶೇಷ.
ಪತ್ನಿಯಿಂದ ಅಧಿಕಾರ ಸ್ವೀಕರಿಸಿದ ಪತಿ: ವಂದಿತಾ ಶರ್ಮ ಅವರ ಪತಿ ಐ.ಎಸ್.ಎನ್. ಪ್ರಸಾದ್ ಕೂಡ ಐಎಎಸ್ ಅಧಿಕಾರಿ. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಅವರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾಗಿ ಪತ್ನಿಯಿಂದಲೇ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.