ADVERTISEMENT

ತಾಕತ್ತಿದ್ದರೆ 5 ಸಾವಿರ ಜನ ಸೇರಿಸಲಿ | ರಮೇಶ್‌ ಕುಮಾರ್‌ಗೆ ವರ್ತೂರು ಸವಾಲು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 19:41 IST
Last Updated 27 ಡಿಸೆಂಬರ್ 2022, 19:41 IST
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್‌ ಮಾತನಾಡಿದರು
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್‌ ಮಾತನಾಡಿದರು   

ಕೋಲಾರ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವ ಜ.9ರ ಸಭೆಗೂ ಮುನ್ನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ತಾಕತ್ತಿದ್ದರೆ ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಐದು ಸಾವಿರ ಜನರನ್ನು ಸೇರಿಸಲಿ ನೋಡೋಣ’ ಎಂದು ಮಾಜಿ ಸಚಿವ ವರ್ತೂರು ಆರ್‌.ಪ್ರಕಾಶ್‌ ಸವಾಲು ಹಾಕಿದರು.

‘ಬೇರೆ ಕ್ಷೇತ್ರದವರನ್ನು ಕರೆತಂದು ಶೋ ಕೊಡುವುದಲ್ಲ; ಕೋಲಾರದವರೇ ಆಗಿರಬೇಕು. ಅಷ್ಟು ಜನರನ್ನು ಸೇರಿಸಿದರೆ ರಮೇಶ್‌ ಕುಮಾರ್‌ಕೋಲಾರ ವೀರ, ಗಂಡು ಎಂಬುದಾಗಿ ಒಪ್ಪಿಕೊಳ್ಳುತ್ತೇನೆ’ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರುತ್ತಿರುವ ರಮೇಶ್ ಕುಮಾರ್ ಅವರೇ ನನ್ನ ಗೆಲುವಿಗೆ ಮೊದಲ ಮೆಟ್ಟಿಲಾಗುತ್ತಿದ್ದಾರೆ. ನನ್ನನ್ನು ಅಡ್ರೆಸ್‌ ಇಲ್ಲದಂತೆ ಕಳುಹಿಸುವ ಬಗ್ಗೆ ಮಾತನಾಡಿದ್ದಾರೆ. ಸ್ಪೀಕರ್‌ ಆಗಿದ್ದ ಸಮಯದಲ್ಲಿಅಮಾನತುಗೊಂಡ 17 ಶಾಸಕರೇ ಮುಂಬರುವ ಚುನಾವಣೆಯಲ್ಲಿ ರಮೇಶ್‌ ಕುಮಾರ್‌ ಅವರನ್ನುಅಡ್ರೆಸ್‌ ಇಲ್ಲದಂತೆ ಮಾಡಲಿದ್ದಾರೆ’ ಎಂದರು.

ADVERTISEMENT

‘ಜ.9 ರಂದು ಕೋಲಾರಕ್ಕೆ ಸಿದ್ದರಾಮಯ್ಯ ಬಂದರೆ ಅಂದೇ ನಾವೂ ಕಾರ್ಯಕ್ರಮ ಆಯೋಜಿಸುತ್ತೇವೆ. ಅವರು ನೂರು ಜನ ಸೇರಿಸಿದರೆ ನಾವು ಐನೂರು ಜನ ಸೇರಿಸುತ್ತೇವೆ’ ಎಂದು ಹೇಳಿದರು.

‘ನಾನು ದುಡ್ಡು ಕೊಟ್ಟು ಯಾರನ್ನೂ ಸಭೆಗೆ ಕರೆಸುವುದಿಲ್ಲ. ಜೆಡಿಎಸ್‌ ಪಂಚರತ್ನ ಕಾರ್ಯಕ್ರಮದಲ್ಲಿ ಕುಮಾರಣ್ಣಗೆ ಜೈ ಎಂದರೆ ₹ 500, ಕಳಶ ಹೊತ್ತ ಮಹಿಳೆಯರಿಗೆ ₹1 ಸಾವಿರ ಕೊಟ್ಟಿದ್ದರು. ತಮ್ಮ ಬಳಿ ಮೂರು ತಲೆಮಾರಿಗೆ ಆಗುವಷ್ಟು ಹಣವಿದೆ ಎಂದು ಒಪ್ಪಿಕೊಂಡಿದ್ದೀರಿ. ಒಂದೂ ರೂಪಾಯಿ ಕೊಡದೆ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಬಿಜೆಪಿಯಲ್ಲಿ ಓಂಶಕ್ತಿ ಚಲಪತಿ ಸೇರಿದಂತೆ ಹೈಕಮಾಂಡ್‌ ಯಾರಿಗೇ ಟಿಕೆಟ್‌ ನೀಡಿದರೂ ಬೆಂಬಲಿಸುತ್ತೇನೆ. ನನಗೆ ಟಿಕೆಟ್‌ ನೀಡಿದರೆ ಗೆದ್ದು ತೋರಿಸುತ್ತೇನೆ’ ಎಂದರು.

‘ಜ.15ರೊಳಗೆ ಕೋಲಾರದ ರಸ್ತೆಗಳಲ್ಲಿ ಗುಂಡಿ‌ ಮುಚ್ಚಿಸಬೇಕು. ಇಲ್ಲದಿದ್ದರೆ ನಮ್ಮ ಜನಪ್ರತಿನಿಧಿಗಳು ಅಸಮರ್ಥರುಎಂದು ನಾನೇ ಮುಖ್ಯಮಂತ್ರಿ ಕೈಕಾಲು ಹಿಡಿದು ಗುಂಡಿ ಮುಚ್ಚಿಸುತ್ತೇನೆ’ ಎಂದು ನುಡಿದರು.

ಮುಖಂಡರಾದ ಬೆಗ್ಲಿ ಪ್ರಕಾಶ್‌, ಸಿ.ಎಸ್‌.ವೆಂಕಟೇಶ್‌, ಅರುಣ್‌ ಪ್ರಸಾದ್‌, ಸೂಲೂರು ಆಂಜನಪ್ಪ, ಸಿ.ಡಿ.ರಾಮಚಂದ್ರ, ಕಾಶಿ ವಿಶ್ವನಾಥ್‌, ಬಂಕ್‌ ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.