ADVERTISEMENT

ವೇದ–ಮಂತ್ರಗಳಿಂದ ಜೀವನ ಸಾರ್ಥಕ: ಜಗದೀಪ್‌ ಧನಕರ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:51 IST
Last Updated 26 ಅಕ್ಟೋಬರ್ 2024, 15:51 IST
<div class="paragraphs"><p>ಬೆಂಗಳೂರಿನಲ್ಲಿ ನಡೆದ ಶೃಂಗೇರಿ ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ ಅವರ&nbsp;ಸುವರ್ಣ ಭಾರತೀ ಸಮಾವೇಶದಲ್ಲಿ ಭಾಗವಹಿಸಿದ್ದ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಅವರ ಪತ್ನಿ ಸುದೇಶ್‌ ಧನಕರ್ ಅವರು ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿ ಆಶೀರ್ವಾದ ಪಡೆದರು.</p></div>

ಬೆಂಗಳೂರಿನಲ್ಲಿ ನಡೆದ ಶೃಂಗೇರಿ ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ ಅವರ ಸುವರ್ಣ ಭಾರತೀ ಸಮಾವೇಶದಲ್ಲಿ ಭಾಗವಹಿಸಿದ್ದ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಅವರ ಪತ್ನಿ ಸುದೇಶ್‌ ಧನಕರ್ ಅವರು ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿ ಆಶೀರ್ವಾದ ಪಡೆದರು.

   

– ಪಿಟಿಐ ಚಿತ್ರ

ಬೆಂಗಳೂರು: ಮನುಷ್ಯ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವ ಎಲ್ಲ ‌‌‌ಸೂತ್ರಗಳನ್ನೂ ವೇದ–ಮಂತ್ರಗಳು ಒಳಗೊಂಡಿವೆ. ಈ ದೈವತ್ವದಲ್ಲಿ ಭಿನ್ನತೆ, ಅಸಮಾನತೆಗೆ ಅವಕಾಶವೇ ಇಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್ ಹೇಳಿದರು.

ADVERTISEMENT

ಅರಮನೆ ಮೈದಾನದಲ್ಲಿ ಸುವರ್ಣ ಭಾರತೀ, ವೇದಾಂತ ಭಾರತೀ ಹಾಗೂ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಶೃಂಗೇರಿ ಶಾರದಾ ಪೀಠದ ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸುವರ್ಣ ಭಾರತೀ ಸಮಾವೇಶ, ‘ನಮಃ ಶಿವಾಯ’ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಹಿಂಸೆ, ಗುರುಹಿರಿಯರನ್ನು ಗೌರವಿಸುವಿಕೆ, ಸಹಭಾಗಿತ್ವ, ಒಳಗೊಳ್ಳುವಿಕೆಯೇ ಸನಾತನ ಧರ್ಮದ ತಿರುಳು. ಶ್ಲೋಕಗಳು ಎಲ್ಲರ ಹೃದಯವನ್ನು ಶುದ್ಧೀಕರಣಗೊಳಿಸುತ್ತವೆ. ಇದೇ  ಭಾರತೀಯ ಸಂಸ್ಕೃತಿ. ಮಾನವೀಯ ಧರ್ಮದ ತಳಹದಿ. ವಸುಧೈವ ಕುಟುಂಬಕಂ ಪರಿಕಲ್ಪನೆ, ಮಂತ್ರಗಳು ಸೃಷ್ಟಿಸುವ ಕಂಪನ, ತಾಳ, ಆಲಾಪಗಳು ಶಾಂತಿ ಮತ್ತು ಸೌಹಾರ್ದವನ್ನು ಸಾರುತ್ತವೆ. ಬಡವರಲ್ಲಿಯೂ ದೇವರನ್ನು ಕಾಣುವ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮ ಒಳಗೊಂಡಿದೆ ಎಂದು ಬಣ್ಣಿಸಿದರು.

ಭಾರತೀಯ ಸನಾತನ ಧರ್ಮ ಮಾನವೀಯತೆಯನ್ನು ಜಗತ್ತಿಗೆ ಸಾರಿದೆ. ಇಡೀ ಭಾರತವೇ ಆಧ್ಯಾತ್ಮದ ಕೇಂದ್ರವಾಗಿದೆ. ಪೆನ್, ಪೆನ್‌ಡ್ರೈವ್‌ ಇಲ್ಲದ ಕಾಲದಲ್ಲಿ ವೇದಮಂತ್ರಗಳನ್ನು ಉಳಿಸಿಕೊಂಡು ಬಂದಿರುವ ಪೂರ್ವಿಕರ ಧೀಶಕ್ತಿ ಊಹಿಸಲೂ ಸಾಧ್ಯವಿಲ್ಲ. ಸ್ವಾರ್ಥ ಇಲ್ಲದ ಭಾರತೀ ತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿ ಐದು ದಶಕಗಳು ಪೂರ್ಣಗೊಂಡಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದ ಸಂದೇಶವನ್ನು ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಓದಿದರು.  

ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತಿ, ಬ್ರಹ್ಮಾನಂದ ಭಾರತಿ ಸ್ವಾಮೀಜಿ, ಕೇಂದ್ರ ಸಚಿವ ವಿ. ಸೋಮಣ್ಣ ಉಪಸ್ಥಿತರಿದ್ದರು.  

ಶೃಂಗೇರಿ ಮಠದ ಭಾರತೀ ತೀರ್ಥರು ಧರ್ಮ ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನರ ಗೌರವವನ್ನು ಉಳಿಸಿದೆ. ಅಂತಹ ಮಠದ ಜತೆಗೆ ಇಡೀ ಸರ್ಕಾರ ಇದೆ
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಯಾರನ್ನಾದರೂ ಪೂಜಿಸು ಪೂಜಿಸದೇ ಇರು. ಧರ್ಮ ಮಾರ್ಗದಲ್ಲಿ ಬದುಕು ಎಂಬುದನ್ನು ಕಲಿಸಿದ್ದು ಸನಾತನ ಧರ್ಮ. ಇಂತಹ ಧರ್ಮದ ಉಳಿವಿಗೆ ಶ್ರಮಿಸಿದವರು ಶಂಕರಾಚಾರ್ಯರು
ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ದಾಖಲೆಗೆ ಸೇರಿದ ‘ನಮಃ ಶಿವಾಯ’

ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1.5 ಲಕ್ಷ ಜನರು ಏಕಕಾಲಕ್ಕೆ ‘ನಮಃ ಶಿವಾಯ’ ಸ್ತೋತ್ರ ಪಠಣ‌ ಮಾಡಿದರು. ಈ ಪಠಣ ‘ಇಂಡಿಯಾ ಬುಕ್‌ ಆಫ್‌ ರೇಕಾರ್ಡ್‌’ಗೆ ಸೇರಿತು.  ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌’ನ ಅಧಿಕಾರಿಗಳು‌ ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಗೆ ದಾಖಲೆಗೆ ಸೇರ್ಪಡೆ ಮಾಡಿದ ಪ್ರಮಾಣಪತ್ರ ನೀಡಿದರು.

ವಿಶ್ವದ ಸನಾತನ ಹಿಂದೂಗಳೂ ಒಟ್ಟಾಗಬೇಕು: ಸ್ವಾಮೀಜಿ

ವಿಶ್ವದಲ್ಲಿರುವ ಎಲ್ಲಾ ಸನಾತನ ಹಿಂದೂಗಳು ಒಟ್ಟಿಗೆ ಸೇರಬೇಕು ಎನ್ನುವ ಆಶಯವಿದೆ. ಹಿಂದೂ ಧರ್ಮ ಉಳಿದರೆ ಜಗತ್ತಿನ ಎಲ್ಲಾ ಧರ್ಮಗಳೂ ಉಳಿಯುತ್ತವೆ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಹಿಂದೂ ಧರ್ಮ ರಕ್ಷಣೆಗೆ ಎಲ್ಲರೂ ಏಕ ಧ್ವನಿಯಿಂದ ಮುನ್ನಡೆಯಬೇಕು. ಶಂಕರಭಾರತೀ ಮಹಾಸ್ವಾಮೀಜಿ ಆಡಂಬರಗಳಿಲ್ಲದೇ ನೈಜ ಕೆಲಸ ಮಾಡುವ ಯತಿಗಳು. ಬ್ರಹ್ಮಾನಂದ ಭಾರತೀ ಸ್ವಾಮೀಜಿ ಸಹ ಗುರುಗಳನ್ನು ಅನುಸರಣೆ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.