ಬೆಳಗಾವಿ: ‘ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಕಳೆದ ಐದು ವರ್ಷಗಳಲ್ಲಿ ಕೇವಲ ₹31 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಜೆಟ್‌ನಲ್ಲಿ ನಿಗಮಕ್ಕೆ ₹50 ಕೋಟಿ ನಿಗದಿಪಡಿಸಿದ್ದರು. ಆದರೆ, ನಿರೀಕ್ಷಿಸಿದಷ್ಟು ಹಣಬಿಡುಗಡೆಯಾಗಿಲ್ಲ. 2020ರಲ್ಲಿ ಒಂದು ಪೈಸೆ ಬಿಡುಗಡೆ ಮಾಡಿಲ್ಲ. 2021ರಲ್ಲಿ ₹3ಕೋಟಿ ಬಿಡುಗಡೆ ಮಾಡಲಾಗಿದೆ‘ ಎಂದು ದೂರಿದರು.
‘ನಿಗಮದಿಂದ ಇಡೀ ರಾಜ್ಯದಲ್ಲಿ 36 ಹಸುಗಳನ್ನು ವಿತರಿಸಲಾಗಿದೆ. ಈ ರೀತಿಯಾದರೆ ಬ್ರಾಹ್ಮಣರ ಅಭಿವೃದ್ಧಿ ಸಾಧ್ಯವೇ? ನಾಮಕಾವಸ್ತೆ ಮಂಡಳಿ ಸ್ಥಾಪಿಸಲಾಗಿದೆ. ಸರ್ಕಾರ ನೀಡುತ್ತಿರುವ ಅನುದಾನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾತ್ರ ಸಾಕಾಗುತ್ತಿದೆ. ಹೆಚ್ಚಿನ ಅನುದಾನ ನೀಡಿದರೆ ನಿಮಗೆ ಬ್ರಾಹ್ಮಣರು ಆಶೀರ್ವಾದ ಮಾಡುತ್ತಾರೆ’ ಎಂದು ಧಾರ್ಮಿಕ ದತ್ತಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ತಿಳಿಸಿದರು.
ಮುಖ್ಯಮಂತ್ರಿ ಜತೆ ಚರ್ಚಿಸಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಶಶಿಕಲಾ ಜೊಲ್ಲೆ ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.