ADVERTISEMENT

ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ: ಪೇಜಾವರ ಶ್ರೀ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:31 IST
Last Updated 23 ನವೆಂಬರ್ 2024, 23:31 IST
ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಸಲ್ಲಿಸಿದ ಸಂತ ಸಮಾವೇಶದ ನಿರ್ಣಯಗಳ ಪ್ರತಿಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾಧ್ಯಮಗಳಿಗೆ ತೋರಿಸಿದರು. ಸಂತ ಸಮಾವೇಶದಲ್ಲಿ ಭಾಗಿಯಾಗಿದ್ದ ಇತರ ಸ್ವಾಮೀಜಿಗಳು ಇದ್ದರು   –ಪ್ರಜಾವಾಣಿ ಚಿತ್ರ
ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಸಲ್ಲಿಸಿದ ಸಂತ ಸಮಾವೇಶದ ನಿರ್ಣಯಗಳ ಪ್ರತಿಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾಧ್ಯಮಗಳಿಗೆ ತೋರಿಸಿದರು. ಸಂತ ಸಮಾವೇಶದಲ್ಲಿ ಭಾಗಿಯಾಗಿದ್ದ ಇತರ ಸ್ವಾಮೀಜಿಗಳು ಇದ್ದರು   –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸ್ವಾತಂತ್ರ್ಯಪೂರ್ವದಲ್ಲಿ ಭಾರತವು ಹಿಂದೂರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಘಟಕವು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಂತ ಸಮಾವೇಶ’ದಲ್ಲಿ ಅವರು ಮಾತನಾಡಿದರು. ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು ಎಂದು ಸಂಭ್ರಮಿಸುತ್ತಿದ್ದೇವೆ. ಆದರೆ ನಿಜಕ್ಕೂ ನಾವು ಸ್ವತಂತ್ರವಾಗಿ ಇದ್ದೇವೆಯೇ’ ಎಂದು ಅವರು ಪ್ರಶ್ನಿಸಿದರು.

‘ಹಿಂದೂಗಳು ನಾವೆಲ್ಲರೂ ಸುಭದ್ರರಾಗಿ ಇದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಈ ದೇಶವನ್ನು ಕಬಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಿಂದೂಗಳನ್ನು ಬೇರೆ ಧರ್ಮಕ್ಕೆ ಸೆಳೆಯುವ ಕೆಲಸ ಆಗುತ್ತಿದೆ. ಈ ಬಗ್ಗೆ ಜಾಗೃತರಾಗಬೇಕು’ ಎಂದರು.

ADVERTISEMENT

‘ಹಿಂದೂ ಧರ್ಮ ಮತ್ತು ಹಿಂದೂಗಳನ್ನು ಗೌರವಿಸುವ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆದರೆ ನಾವು ಚುನಾವಣೆ ಸಂದರ್ಭದಲ್ಲಿ ಸುಮ್ಮನೆ ಕೂರುತ್ತೇವೆ. ಆಸೆ-ಆಮಿಷಗಳಿಗೆ ಬಲಿಯಾಗಿ, ಹಿಂದೂ ಧರ್ಮವನ್ನು ವಿಧ್ವಂಸಗೊಳಿಸುತ್ತೇವೆ ಎಂದು ಸಂಕಲ್ಪ ಮಾಡುವ ಪಕ್ಷವನ್ನು ಅಧಿಕಾರಕ್ಕೆ ತರುತ್ತಿದ್ದೇವೆ. ಇದು ಬದಲಾಗಬೇಕು. ಚುನಾವಣೆ ಸಂದರ್ಭದಲ್ಲಿ ನಾವು ಬೀದಿಗೆ ಇಳಿಯಬೇಕು’ ಎಂದು ಆಗ್ರಹಿಸಿದರು.

ಕೆ.ಆರ್.ಪುರಂನ ಸಾಧನಾ ಮಠದ ಚಂದ್ರಶೇಖರನಂದ ಸ್ವಾಮೀಜಿ, ‘ಈಗ ವಾಟ್ಸ್‌ಆ್ಯಪ್‌ ಯೂನಿವರ್ಸಿಟಿ ಎಂದು ಪದೇಪದೇ ಹೇಳಲಾಗುತ್ತದೆ. ಆದರೆ ವಾಟ್ಸ್‌ಆ್ಯಪ್‌ ಮೂಲಕ ಬರುವ ವಿಚಾರಗಳಿಂದ ಜಾಗೃತಿ ಮೂಡುತ್ತಿದೆ. ಶಿರಡಿ, ತಿರುಪತಿ ಸೇರಿ ಹಲವು ತೀರ್ಥಕ್ಷೇತ್ರಗಳಲ್ಲಿನ ಆದಾಯ ಅನ್ಯರ ಪಾಲಾಗುತ್ತಿದೆ ಎಂಬುದು ಆಘಾತಕಾರಿ ವಿಚಾರ. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಈಗಿನ ಶಿಕ್ಷಣ ಪದ್ಧತಿ ಇಂಗ್ಲಿಷರದ್ದು. ಅಲ್ಲಿ ನಮ್ಮ ಸಂಸ್ಕೃತಿಯನ್ನು ಎಲ್ಲಿ ಹೇಳಿಕೊಡುತ್ತಾರೆ? ನಮ್ಮ ಸಂಸ್ಕೃತಿ ಮತ್ತು ಸನಾತನ ಧರ್ಮ ಉಳಿಯಬೇಕು ಅಂದರೆ ಗುರುಕುಲ ಪದ್ಧತಿ ಜಾರಿಗೆ ತರಬೇಕು’ ಎಂದರು.

ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದಶ್ರೀ, ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಮಹಾಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸೇರಿ 30ಕ್ಕೂ ಹೆಚ್ಚು ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು.

ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳು

  • ಸನಾತನ ಮಂಡಳಿ ರಚಿಸಲು ಆಗ್ರಹ

  • ವಕ್ಫ್‌ ಹೆಸರಿನಲ್ಲಿ ಹಿಂದೂಗಳ ದೇವಾಲಯಗಳು ರೈತರ ಜಮೀನು ಕಬಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು

  • ವಕ್ಫ್‌ ಮಂಡಳಿಯಂತೆ ಸನಾತನ ಧರ್ಮದ ರಕ್ಷಣೆಗಾಗಿ ‘ಸನಾತನ ಮಂಡಳಿ’ ರಚಿಸಬೇಕು

  • ದೇವಾಲಯಗಳು ಅವುಗಳ ಆಸ್ತಿ ಮತ್ತು ಹಣಕಾಸು ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಸಾಧು ಸಂತರಿಗೆ ಅಥವಾ ಸನಾತನ ಮಂಡಳಿಗೆ ನೀಡಬೇಕು. ಸರ್ಕಾರದ ಹಸ್ತಕ್ಷೇಪ ಇರಬಾರದು

  • ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಬೇಕು * ಖಬರಸ್ಥಾನಕ್ಕೆ ಸರ್ಕಾರಿ ಜಮೀನು ನೀಡಬೇಕು ಎಂಬ ಆದೇಶವನ್ನು ಹಿಂಪಡೆಯಬೇಕು

  • ಲವ್‌ ಜಿಹಾದ್‌ನಿಂದ ಹಿಂದೂ ಯುವತಿಯರನ್ನು ಸರ್ಕಾರ ರಚಿಸಬೇಕು

ಸಂತ ಸಮಾವೇಶದಲ್ಲಿ ತೆಗೆದುಕೊಂಡ ಈ ನಿರ್ಣಯಗಳ ಪ್ರತಿಯನ್ನು ಸಂತರ ನಿಯೋಗವು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಸಲ್ಲಿಸಿತು. ರಾಜಭವನದಿಂದ ಹೊರಬಂದ ಪೇಜಾವರ ಶ್ರೀ ‘ನಮ್ಮ ಬೇಡಿಕೆಗೆ ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.