ADVERTISEMENT

ಮುರುಘಾ ಮಠದಲ್ಲಿ ಮತ್ತೊಬ್ಬ ಬಾಲಕಿ ಮೇಲೂ ನಡೆದಿತ್ತು ದೌರ್ಜನ್ಯ: ಸಂತ್ರಸ್ತೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 19:44 IST
Last Updated 10 ನವೆಂಬರ್ 2022, 19:44 IST
ಮುರುಘಾ ಮಠ
ಮುರುಘಾ ಮಠ   

ಚಿತ್ರದುರ್ಗ: ಮುರುಘಾ ಮಠದ ಹಾಸ್ಟಲ್‌ನಲ್ಲಿದ್ದ ಮತ್ತೊಬ್ಬ ಬಾಲಕಿಯ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಪೊಲೀಸರ ಎದುರು ನೀಡಿದ ಹೇಳಿಕೆಯಲ್ಲಿ ದೌರ್ಜನ್ಯದ ಸ್ವರೂಪವನ್ನು ಸಂತ್ರಸ್ತೆ ಬಿಚ್ಚಿಟ್ಟಿದ್ದಾರೆ.

ಶಿವಮೂರ್ತಿ ಮುರುಘಾ ಶರಣರು ಸೇರಿ ಮೂವರ ವಿರುದ್ಧ ತನಿಖಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಈ ಉಲ್ಲೇಖವಿದೆ.

ತನಿಖೆಯ ಸಂದರ್ಭದಲ್ಲಿ ಕೆಲವರು ನೀಡಿದ ಸುಳಿವಿನ ಆಧಾರದ ಮೇರೆಗೆ ಪೊಲೀಸರು ಸಂತ್ರಸ್ತೆಯನ್ನು ಪತ್ತೆ ಮಾಡಿದ್ದಾರೆ. ಮದುವೆಯಾಗಿ ಕೌಟುಂಬಿಕ ಜೀವನ ನಡೆಸುತ್ತಿರುವ ಸಂತ್ರಸ್ತೆ, ಹಾಸ್ಟೆಲ್‌ನಲ್ಲಿದ್ದ ಸಂದರ್ಭದಲ್ಲಿ ಅನುಭವಿಸಿದ ಯಾತನೆಯನ್ನು ಹೇಳಿಕೊಂಡಿದ್ದಾರೆ.

ADVERTISEMENT

‘ಎಲ್ಲರೂ ಮಲಗಿದ ಬಳಿಕ ಹಿಂಬಾಗಿಲಿನ ಮೂಲಕ ಸ್ವಾಮೀಜಿ ಕೊಠಡಿಗೆ ವಾರ್ಡನ್‌ ಕಳುಹಿಸುತ್ತಿದ್ದರು. ಹಣ್ಣು ತಿಂದ ನಂತರ ನನ್ನನ್ನು ಮುಟ್ಟುತ್ತಿದ್ದರು. ಇಬ್ಬರೂ ಗಂಡ–ಹೆಂಡತಿಯರಂತೆ ಸೇರುತ್ತಿದ್ದೆವು. ನಸುಕಿನ 4.30ಕ್ಕೆ ಅಲಾರ್ಮ್ ಕೂಗಿದಾಗ ಹಾಸ್ಟಲ್‌ಗೆ ಕಳುಹಿಸುತ್ತಿದ್ದರು’ ಎಂದು ಸಂತ್ರಸ್ತೆ ನೀಡಿದ ಹೇಳಿಕೆಯನ್ನು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಅನುಮಾನ ಹೊರಹಾಕಿದ ಸಹಾಯಕರು: ‘ಹಾಸ್ಟೆಲ್‌ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಕೊಠಡಿಗೆ ಕರೆಸಿಕೊಳ್ಳುತ್ತಾರೆ ಎಂಬ ವಿಚಾರವನ್ನು ಮಠಕ್ಕೆ
ಬರುವ ಭಕ್ತರು ಮಾತನಾಡಿಕೊಳ್ಳುತ್ತಿದ್ದರು.
ನಮಗೂ ಈ ಬಗ್ಗೆ ಅನುಮಾನ ಮೂಡಿತ್ತು.
ಆದರೆ, ಕೆಲಸದಿಂದ ವಜಾ ಮಾಡಿದರೆ ಎಂಬ ಆತಂಕದಿಂದ ಸುಮ್ಮನಿದ್ದೆವು’ ಎಂದು ಶಿವಮೂರ್ತಿ ಮುರುಘಾ ಶರಣರ ಕೊಠಡಿಯ ಸಹಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಇನ್ನೂ ಇಬ್ಬರು ಸಹಾಯಕರು ತನಿಖಾಧಿಕಾರಿ ಎದುರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ.

‘ಸ್ವಾಮೀಜಿಯ ಬೆಡ್‌ರೂಂಗೆ ವಾರ್ಡನ್‌ ವಿದ್ಯಾರ್ಥಿನಿಯರೊಂದಿಗೆ ಹೋಗುತ್ತಿದ್ದರು. ಗಂಟೆಗಳ ಕಾಲ ಅಲ್ಲಿದ್ದು, ಮರಳುತ್ತಿದ್ದರು. ಈ ಸಮಯದಲ್ಲಿ ನಾವು ಕೊಠಡಿಗೆ ಹೋಗುವಂತಿರಲಿಲ್ಲ’ ಎಂದು ಸಹಾಯಕರೊಬ್ಬರು ನೀಡಿರುವ ಹೇಳಿಕೆ ದೋಷಾರೋಪ ಪಟ್ಟಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.