ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡಗುಂಜಿಯ ವಿನಾಯಕ ದೇವಸ್ಥಾನದ ಭೋಜನ ಶಾಲೆಯಲ್ಲಿ ಪಂಕ್ತಿಬೇಧ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರವಾಸಿಗರೊಬ್ಬರು ಭೋಜನಶಾಲೆಯ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಭಾನುವಾರ ದೇವಾಲಯಕ್ಕೆ ಭೇಟಿ ನೀಡಿದ್ದವರ ಪೈಕಿ ಬೆಂಗಳೂರು ಭಾಗದಿಂದ ಬಂದಿದ್ದ ಭಕ್ತರೊಬ್ಬರು, ‘ಭೋಜನಶಾಲೆಯಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆ ಸಮುದಾಯದವರಿಗೆ ಮೊದಲು ಊಟ ಹಾಕಿ ನಂತರ ಉಳಿದವರಿಗೆ ಊಟ ಬಡಿಸಲಾಗುತ್ತಿದೆ. ಪಂಕ್ತಿಬೇಧ ಮಾಡುವವರ ಮೇಲೆ ಕ್ರಮವಾಗಬೇಕು’ ಎಂದು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಾಕಿದ್ದರು. ಅಲ್ಲದೆ ದೇವಸ್ಥಾನದ ಸಿಬ್ಬಂದಿ ವಾಗ್ವಾದ ನಡೆಸಿದ ದೃಶ್ಯವನ್ನೂ ಹರಿಬಿಟ್ಟಿದ್ದರು.
‘ದೇವಾಲಯದಲ್ಲಿ ಪಂಕ್ತಿಬೇಧ ಮಾಡುತ್ತಿಲ್ಲ. ಭಕ್ತರ ಸಂಖ್ಯೆ ಹೆಚ್ಚಿದ್ದ ದಿನ ಸಿಬ್ಬಂದಿ ಕೊರತೆಯೂ ಇತ್ತು. ಮೊದಲ ಪಂಕ್ತಿ ಮುಗಿದ ಬಳಿಕ ಭೋಜನ ಶಾಲೆಯ ಬಾಗಿಲು ಕೆಲವು ನಿಮಿಷ ಹಾಕಲಾಗಿತ್ತು. ಈ ವೇಳೆ ತಗಾದೆ ತೆಗೆದು ಪ್ರವಾಸಿಗರೊಬ್ಬರು ದೃಶ್ಯ ಮಾಡಿ ಹರಿಬಿಟ್ಟಿದ್ದಾರೆ’ ಎಂದು ದೇವಸ್ಥಾನದ ಸಿಬ್ಬಂದಿಯೊಬ್ಬರು ಹೇಳಿದರು.
‘ಇಡಗುಂಜಿ ದೇವಾಲಯದಲ್ಲಿ ನಡೆದ ಘಟನೆ ಗಮನಕ್ಕೆ ಬಂದಿದ್ದು, ಕೂಡಲೆ ದೇವಸ್ಥಾನಕ್ಕೆ ಸಂಬಂಧಪಟ್ಟವರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.