ADVERTISEMENT

ವಿಧಾನ ಪರಿಷತ್ ಚುನಾವಣೆ: 11 ಮಂದಿ ಅವಿರೋಧ ಆಯ್ಕೆ ಬಹುತೇಕ ಖಚಿತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 16:11 IST
Last Updated 3 ಜೂನ್ 2024, 16:11 IST
ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌. 
ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.    

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ನಾಮಪತ್ರ ಸಲ್ಲಿಕೆ ಕಡೆಯ ದಿನವಾಗಿದ್ದ ಸೋಮವಾರ ಕಾಂಗ್ರೆಸ್‌ನ ಏಳು, ಬಿಜೆಪಿಯ ಮೂವರು ಮತ್ತು ಜೆಡಿಎಸ್‌ನ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು.  ಮಂಗಳವಾರ (ಜೂ.4) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಗುರುವಾರ (ಜೂ.6) ಕೊನೆ ದಿನ. ಯಾರೂ ನಾಮಪತ್ರ ಹಿಂದಕ್ಕೆ ಪಡೆಯದಿದ್ದರೆ, ಎಲ್ಲರನ್ನೂ ಅವಿರೋಧ ಆಯ್ಕೆ ಎಂದು ಘೋಷಿಸಲಾಗುವುದು.

ಕಾಂಗ್ರೆಸ್‌ನಿಂದ ಡಾ. ಯತೀಂದ್ರ, ಎನ್‌.ಎಸ್. ಬೋಸರಾಜು, ಕೆ. ಗೋವಿಂದರಾಜ್‌, ಬಿಲ್ಕಿಸ್ ಬಾನು, ಐವನ್ ಡಿಸೋಜ, ಎ. ವಸಂತ ಕುಮಾರ್, ಜಗದೇವ್ ಗುತ್ತೇದಾರ್, ಬಿಜೆಪಿಯಿಂದ ಸಿ.ಟಿ. ರವಿ, ಎನ್‌‌. ರವಿಕುಮಾರ್‌ ಮತ್ತು ಎಂ.ಜಿ. ಮುಳೆ ಹಾಗೂ ಜೆಡಿಎಸ್‌ನಿಂದ ಟಿ.ಎನ್‌.ಜವರಾಯಿಗೌಡ ಅವರು ನಾಮಪತ್ರ ಸಲ್ಲಿಸಿದರು.

ADVERTISEMENT

‘11 ಅಭ್ಯರ್ಥಿಗಳಿಂದ ಒಟ್ಟು 26 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರದ ಆರಂಭದ ದಿನದಿಂದ 12 ಅಭ್ಯರ್ಥಿಗಳಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೇ 31ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆರ್.ಎಂ. ಆಸಿಫ್ ಪಾಷಾ ಅವರು ಒಂದು ನಾಮಪತ್ರ ಸಲ್ಲಿಸಿದ್ದರು’ ಎಂದು ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಇದ್ದರು.  

ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಅಭಿನಂದಿಸಿದ ಬಿ.ವೈ.ವಿಜಯೇಂದ್ರ ಮತ್ತು ಆರ್‌.ಅಶೋಕ

ಸಿಎಂ ಡಿಸಿಎಂ ಎಚ್‌ಡಿಕೆ ಮುಖಾಮುಖಿ

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ವಿಧಾನಸೌಧದ ಕಾರಿಡಾರ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮುಖಾಮುಖಿಯಾದರು. ತಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ವಿಧಾನಸಭೆ ಕಾರ್ಯದರ್ಶಿಯ ಕೊಠಡಿಯ ಹೊರಗಡೆ ಸಿದ್ದರಾಮಯ್ಯ ನಿಂತಿದ್ದರು. ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿ ಕುಮಾರಸ್ವಾಮಿ ಹೊರಗೆ ಬರುತ್ತಿದ್ದಂತೆ ಇಬ್ಬರೂ ಮುಖಾಮುಖಿಯಾದರು. ಉಭಯ ನಾಯಕರು ಪರಸ್ಪರ ನಮಸ್ಕರಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡರ ಜೊತೆ ಕುಶಲೋಪರಿ ವಿಚಾರಿಸಿದರು. ಜಿ.ಟಿ. ದೇವೆಗೌಡರ ಕೈಕುಲುಕಿ ಆತ್ಮೀಯವಾಗಿ ಮಾತನಾಡಿಸಿದರು. 

ಪರಸ್ಪರ ಮುಖ ನೋಡದ ಡಿಕೆಶಿ - ಎಚ್​ಡಿಕೆ: ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಚ್‌.ಡಿ ಕುಮಾರಸ್ವಾಮಿ ಕೂಡಾ ಮುಖಾಮುಖಿಯಾದರು. ಆದರೆ ಉಭಯ ನಾಯಕರು ಮುಖವನ್ನೂ ನೋಡದೇ ತೆರಳಿದರು. ಹರ್ಷದಲ್ಲಿ ಬಿಜೆಪಿ ನಾಯಕರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬ ಮತಗಟ್ಟೆ ಸಮೀಕ್ಷೆಗಳ ಕಾರಣ ಬಿಜೆಪಿ ನಾಯಕರಲ್ಲಿ ಹರ್ಷೋಲ್ಲಾಸ ಎದ್ದು ಕಾಣುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.