ಬೆಂಗಳೂರು: ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಅ.21 ಕ್ಕೆ ಚುನಾವಣಾ ದಿನಾಂಕ ನಿಗದಿಯಾದ ಬೆನ್ನಲ್ಲೇ ಟಿಕೆಟ್‌ಗಾಗಿ ಪಕ್ಷದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಈ ಸ್ಥಾನಕ್ಕೆ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಉದಯಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಕೆ.ಸುರೇಶ್ ಕುಮಾರ್ ಮತ್ತು ಸತೀಶ್ ಕಂಪಲ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ.
ಆದರೆ, ನಳಿನ್ ಕುಮಾರ್ ಕಟೀಲ್ ಅವರ ಹೆಸರನ್ನೇ ಶಿಫಾರಸು ಮಾಡಿ ಕಳಿಸಬೇಕು ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರೊಬ್ಬರು ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ದಕ್ಷಿಣ ಕನ್ನಡ ಮೂಲದ ಕೆಲವು ನಾಯಕರು ಈಗಾಗಲೇ ಹಲವು ಬಾರಿ ಸಂಸದರಾಗಿರುವ ಕಟೀಲ್ ಅವರ ಬದಲಿಗೆ ಹೊಸಬರಿಗೆ ಅವಕಾಶ ಕೊಡಬೇಕು ಎಂದು ಒತ್ತಡ ಹೇರಿದ್ದಾರೆ ಎಂದು ಮೂಲಗಳು ಹೇಳಿವೆ. ನಳಿನ್ ಕುಮಾರ್ ಕಟೀಲ್ ಅವರು ಬಿ.ಎಲ್.ಸಂತೋಷ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಸಿ.ಟಿ.ರವಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಅವರಿಗೆ ವಿಧಾನಪರಿಷತ್‌ಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಕಟೀಲ್ ಅವರು ಬೇರೊಬ್ಬರಿಗಾಗಿ ತಮ್ಮ ಸೀಟನ್ನು ಬಿಟ್ಟುಕೊಟ್ಟಿದ್ದಾರೆ. ಆದ್ದರಿಂದ ಕಟೀಲ್ ಅವರಿಗೆ ಅವಕಾಶ ನೀಡಬೇಕು ಎಂದು ದೆಹಲಿ ಮೂಲದ ನಾಯಕರು ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಅಭ್ಯರ್ಥಿ ಆಯ್ಕೆಗಾಗಿ ರಾಜ್ಯ ಬಿಜೆಪಿ ನಾಯಕರ ಸಭೆ ಸೋಮವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.