ಬೆಂಗಳೂರು: ವಿಧಾನಮಂಡಲದ ‘ಮೇಲ್ಮನೆ’ಯಲ್ಲಿ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಮೂರು ರಾಜಕೀಯ ಪಕ್ಷಗಳು ರಣತಂತ್ರ ಹೆಣೆಯುತ್ತಿರುವ ಬೆನ್ನಲ್ಲೇ, 20 ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿದೆ.ಡಿ.10 ರಂದು ಮತದಾನ ನಡೆಯಲಿದೆ.
25 ಸದಸ್ಯರ ಅವಧಿ 2022 ರ ಜನವರಿ 5 ಕ್ಕೆ ಅಂತ್ಯಗೊಳ್ಳಲಿದ್ದು, ಹೊಸಬರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಕೋವಿಡ್–19 ಮಾರ್ಗಸೂಚಿಯನ್ನು ಅನುಸರಿಸಿ ಚುನಾವಣೆ ಪ್ರಕ್ರಿಯೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಮಂಗಳವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಸರ್ಕಾರ ಯಾವುದೇ ಘೋಷಣೆಗಳನ್ನು ಹೊರಡಿಸುವಂತಿಲ್ಲ.
ಚುನಾವಣಾ ಆಯೋಗದ ಆದೇಶ ಹೊರ ಬಿದ್ದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಪ್ರಸ್ತುತ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಹಲವು ಮಸೂದೆಗಳಿಗೆ ಅಂಗೀಕಾರ ಪಡೆಯಲು ಜೆಡಿಎಸ್ ಜತೆ ಹೊಂದಾಣಿಕೆ ಅನಿವಾರ್ಯವಾಗಿತ್ತು. 25 ಸ್ಥಾನಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ, ಬಹುಮತ ಪಡೆಯಲು ಸಾಧ್ಯವಿದೆ. ಬಿಜೆಪಿ 33 (1 ಪಕ್ಷೇತರ ಸೇರಿ), ಕಾಂಗ್ರೆಸ್ 29 ಮತ್ತು ಜೆಡಿಎಸ್ 12 ಸ್ಥಾನಗಳನ್ನು ಹೊಂದಿವೆ. ಮೇಲ್ಮನೆಯಲ್ಲಿ ಬಹುಮತಕ್ಕೆ ಸಭಾಪತಿ ಹೊರತುಪಡಿಸಿ 38 ಸ್ಥಾನಗಳ ಅಗತ್ಯವಿದೆ.
ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಮಾಜ ಕಲ್ಯಾಣ ಸಚಿವ ಹಾಗೂ ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿ ಮಠ ಮತ್ತು ವಿರೋಧ ಪಕ್ಷದ ಸಚೇತಕ ಎಂ. ನಾರಾಯಣ ಸ್ವಾಮಿ ಅವರು ತಮ್ಮ ಸ್ಥಾನದಲ್ಲಿ ಉಳಿಸಿಕೊಳ್ಳಬೇಕಾದರೆ ಗೆಲ್ಲಲೇಬೇಕಾದ ಅಗ್ನಿಪರೀಕ್ಷೆ ಎದುರಾಗಿದೆ.
ಕಳೆದ ಬಾರಿ 25 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸಿದೆ. ಇದಕ್ಕಾಗಿನಾಲ್ಕು ತಂಡಗಳಲ್ಲಿ ‘ಜನಸ್ವರಾಜ್ ಸಮಾವೇಶ’ವನ್ನು ಆರಂಭಿಸಲು ತೀರ್ಮಾನಿಸಿದೆ.
l ಚುನಾವಣಾ ಅಧಿಸೂಚನೆ: ನ.16
l ನಾಮಪತ್ರ ಸಲ್ಲಿಸಲು ಕೊನೆ ದಿನ: ನ.23
l ನಾಮಪತ್ರಗಳ ಪರಿಶೀಲನೆ:ನ.24
l ನಾಮಪತ್ರ ಹಿಂದಕ್ಕೆ ಪಡೆಯಲು ಕಡೆ ದಿನ:ನ.26
l ಮತದಾನ;ಡಿ.10 (ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ)
l ಮತಗಳ ಎಣಿಕೆ; ಡಿ.14
ಯಾರಿಗೆ ಮತದಾನದ ಅಧಿಕಾರ
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರಾಗಿದ್ದು, ಇವರಲ್ಲಿ ಎಷ್ಟು ಮಂದಿ ಸದಸ್ಯರು ಮತದಾನಕ್ಕೆ ಅರ್ಹತೆ ಹೊಂದಿದ್ದಾರೆ ಎಂಬುದರ ಬಗ್ಗೆ ಇನ್ನು ಎರಡು ದಿನಗಳಲ್ಲಿ ಮತದಾರರ ಕರಡು ಪ್ರಕಟಿಸಲಾಗುವುದು. ಆಗಲೇ ಮತದಾರರ ನಿಖರ ಮಾಹಿತಿ ಸಿಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯತ್ವದ ಅವಧಿ ಮುಗಿದಿದ್ದರೆ ಅವರಿಗೆ ಮತದಾನದ ಹಕ್ಕು ಇರುವುದಿಲ್ಲ. ಚುನಾವಣೆ ನಡೆಯುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅರ್ಹ ಮತದಾರರ ಕರಡು ಪ್ರಕಟಿಸುವರು ಎಂದರು.
ಬಿಬಿಎಂಪಿಯ 198, ತಾಲೂಕು ಪಂಚಾಯಿತಿ 3,285 ಹಾಗೂ ಜಿಲ್ಲಾ ಪಂಚಾಯಿತಿ-1,191 ಸದಸ್ಯರ ಅವಧಿ ಮುಗಿದಿದ್ದು, ಮತ ಚಲಾವಣೆ ಹಕ್ಕು ಕಳೆದುಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.