ಬೆಂಗಳೂರು: ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಯಲ್ಲಿ ಬಿಜೆಪಿ– ಜೆಡಿಎಸ್ ಪಕ್ಷಗಳು ತಾವು ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಅನುಕೂಲಕರ ವಾತಾವರಣ ಆಧರಿಸಿ ಪರಸ್ಪರ ಒಳ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ಚುನಾವಣಾ ಮೈತ್ರಿ ಕುರಿತು ಉಭಯ ಪಕ್ಷಗಳ ನಾಯಕರ ನಡುವೆ ಹಲವು ದಿನಗಳಿಂದಲೂ ತೆರೆಮರೆಯಲ್ಲಿ ಚರ್ಚೆ ನಡೆಯುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದರು.
‘ಎರಡೂ ಪಕ್ಷಗಳು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವುದು ಇದರ ಹಿಂದಿನ ಲೆಕ್ಕಾಚಾರ. ಈ ಕಾರಣಕ್ಕಾಗಿ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲಿಸುವ ನಿರ್ಣಯವನ್ನು ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.
‘ಕೋಲಾರ– ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಮತದಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಬಿಜೆಪಿಯು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ನಿರ್ಣಯಿಸಿದರೆ, ಅದಕ್ಕೆ ಪ್ರತಿಯಾಗಿ ಮೈಸೂರಿನ ದ್ವಿಸದಸ್ಯ ಕ್ಷೇತ್ರದ ಎರಡೂ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್ ಮತದಾರರು ಬೆಂಬಲ ಸೂಚಿಸುವ ತೀರ್ಮಾನಕ್ಕೆ ಬರಲು ಜೆಡಿಎಸ್ತಯಾರಿದೆ’ ಎಂದು ಆ ಪಕ್ಷದಮೂಲಗಳು ಹೇಳಿವೆ. ಬಹಿರಂಗವಾಗಿ ಬೆಂಬಲ ಘೋಷಿಸುವ ಸಾಧ್ಯತೆ ಕಡಿಮೆ. ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸಂದೇಶವನ್ನಷ್ಟೇ ರವಾನಿಸುವ ಲೆಕ್ಕಾಚಾರ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.