ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಶಾಸಕರ ಖರೀದಿಗೆ ಆಮಿಷ ಒಡ್ಡಿರುವ ಪ್ರಕರಣ ಹಾಗೂ ಈ ಕುರಿತ ಆಡಿಯೊ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಆಡಳಿತ ಪಕ್ಷದವರೇ ಧರಣಿ ನಡೆಸಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಎರಡು ಬಾರಿ ಮುಂದೂಡಿದರು.
ಪ್ರಶ್ನೋತ್ತರ ಆರಂಭವಾಗುತ್ತಲೇ ಆಡಳಿತ ಪಕ್ಷದ ಸದಸ್ಯರು ‘ಸ್ಪೀಕರ್‌ಗೆ ಲಂಚ ನೀಡುವ ಆಮಿಷ ಒಡ್ದಿರುವ ಯಡಿಯೂರಪ್ಪ ಅವರನ್ನು ಬಂಧಿಸಿ’ಎಂಬ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಲಾರಂಭಿದರು.
ಇದನ್ನೂ ಓದಿ...ಆಡಿಯೊ ಧ್ವನಿ ನನ್ನದೇ: ಬಿಎಸ್ವೈ
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಸರ್ಕಾರ ನಿಮ್ಮದು. ನೀವು ತನಿಖೆಗೆ ಒತ್ತಾಯಿಸಿ ಕಲಾಪಕ್ಕೆಅಡ್ಡಿಪಡಿಸುವುದು ಯಾವ ನ್ಯಾಯ. ಸದನದ ಇತಿಹಾಸದಲ್ಲಿ ಯಾವತ್ತಾದರೂ ಈ ರೀತಿ ಆಗಿದೆಯೇ’ಎಂದು ಟೀಕಿಸಿದರು.
ಸಭಾಪತಿಯವರು, ‘ಎಲ್ಲರೂ ಕುಳಿತುಕೊಳ್ಳಿ’ಎಂದು ಪದೇ ಪದೇ ವಿನಂತಿಸಿದರೂ ಸದಸ್ಯರು ಗದ್ದಲ ಮುಂದುವರಿಸಿದರು.
ಸಿಟ್ಟಿಗೆದ್ದ ಸಭಾಪತಿ 'ಹಾಗಾದರೆ ನೀವೇ ಕಲಾಪ ನಡೆಸಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗದ್ದಲ ಮತ್ತೆ ಮುಂದುವರಿದಾಗ 5 ನಿಮಿಷ ಕಲಾಪ ಮುಂದೂಡಿದರು. ಕಲಾಪ ಮತ್ತೆ ಆರಂಭವಾದಾಗಲೂ ಆಡಳಿತ ಪಕ್ಷದ ಸದಸ್ಯರು ಘೋಷಣೆ ಕೂಗಲಾರಂಭಿಸಿದರು.
ಸದನದ ಗೌರವಕ್ಕೆ ಧಕ್ಕೆ ತರುವಂತೆ ವಿಧಾನಸಭೆಯ ವಿರೋಧ ಪಕ್ಷದ ಸದಸ್ಯರು ನಡೆದುಕೊಂಡಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಭಪತಿ ಪದೆಪದೇ ವಿನಂತಿಸಿದರೂ ಕುಳಿತುಕೊಳ್ಳಲಿಲ್ಲ.
ಇದನ್ನೂ ಓದಿ...ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊದಲ್ಲಿ ಏನಿದೆ?
‘ಈ ಸದನ ನಡೆಸಬೇಕೇ ಬೇಡವೇ’ಎಂದು ಸಭಾಪತಿ ಸಿಟ್ಟಿನಿಂದ ಪ್ರಶ್ನಿಸಿದರು. ನೀವು ನೋಟಿಸ್ ನೀಡಿಲ್ಲ. ನಿಮಗೆ ಇಚ್ಛೆ ಬಂದಂತೆ ಕಲಾಪ ನಡೆಸಲು ಇದು ನಿಮ್ಮ ಮನೆ ಅಲ್ಲ. ಕುಳಿತುಕೊಳ್ಳಿ' ಎಂದು ಸಭಾಪತಿಯವರು ಗದರಿದರು.
ಬಳಿಕವೂ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದ್ದಲ್ಲದೇ ಸಭಾಪತಿ ಪೀಠದ ಎದುರು ಧರಣಿ ಆರಂಭಿಸಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿ, ‘ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಆಡಳಿತ ಪಕ್ಷದವರೇ ಸದನದಲ್ಲಿ ಧರಣಿ ನಡೆಸುವುದೆಂದರೆ ಏನರ್ಥ. ಮುಖ್ಯಮಂತ್ರಿ ರಾಜೀನಾಮೆ ನೀಡಲಿ. ನಂತರ ಬೇಕಿದ್ದರೆ ನೀವು ಪ್ರತಿಭಟನೆ ನಡೆಸಿ’ಎಂದರು.
ಬಳಿಕ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.
ಬಿಜೆಪಿ ಸಭಾತ್ಯಾಗ
ಮುಂದೂಡಲ್ಪಟ್ಟಿದ್ದ ವಿಧಾನಪರಿಷತ್ ಕಲಾಪ ಮಧ್ಯಾಹ್ನ ಮತ್ತೆ ಆರಂಭವಾದಾಗಲೂ ಅಡಳಿತ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಈ ನಡವಳಿಕೆಯನ್ನು ಖಂಡಿಸಿ ವಿರೋಧ ಪಕ್ಷದವರು ಸಭಾತ್ಯಾಗ ನಡೆಸಿದರು.
ವಿಧಾನ ಮಂಡಲದ ಉಭಯಸದನಗಳ ಗೌರವಕ್ಕೆ ತರುವ ಯತ್ನ ನಡೆದಿದೆ. ಸಭಾಧ್ಯಕ್ಷರ ಪೀಠದ ಬಗ್ಗೆಯೇ ಹಗುರವಾದ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಉಳಿದ ಎಲ್ಲವನ್ನು ಬದಿಗೊತ್ತಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾನಾಯಕಿ ಜಯಮಾಲಾ ಒತ್ತಾಯಿಸಿದರು. ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸುವುದು ಸರಿ ಅಲ್ಲ. ಅವರು ದಯವಿಟ್ಟು ಆಸನಗಳಿಗೆ ಮರಳ ಬೇಕು ಎ್ದು ಮನವಿ ಮಾಡಿದರು.
ಬಳಿಕ ಸದಸ್ಯರು ಧರಣಿ ಕೈಬಿಟ್ಟರು.ಪ್ರಶ್ನೋತ್ತರದ ಬದಲು ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತಂದ ವಿಚಾರ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
'ಈ ಬಗ್ಗೆ ನೋಟಿಸ್ ನೀಡಿ. ನಂತರ ನೋಡೋಣ' ಎಂದು ಸಭಾಪತಿ ತಿಳಿಸಿದರು. ಬಳಿಕ ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.