ADVERTISEMENT

ವಿಧಾನ ಪರಿಷತ್‌ | ದಕ್ಷಿಣ ಶಿಕ್ಷಕರ ‘ಮತಾದೇಶ’ ಯಾರಿಗೆ?

‘ಪಂಚ ಗೆಲುವಿನ’ ವೀರರಾಗುವರೇ ಮರಿತಿಬ್ಬೇಗೌಡ; ಹೊಸ ಮುಖಕ್ಕೆ ಸಿಕ್ಕೀತೇ ಮಣೆ

ಎಂ.ಮಹೇಶ
Published 6 ಜೂನ್ 2024, 5:55 IST
Last Updated 6 ಜೂನ್ 2024, 5:55 IST
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ   

ಮೈಸೂರು: ‘ದಕ್ಷಿಣ ಶಿಕ್ಷಕರ ಕ್ಷೇತ್ರ’ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಮತ ಎಣಿಕೆಯು ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಜೂನ್‌ 6ರಂದು ಬೆಳಿಗ್ಗೆ 8ರಿಂದ ಆರಂಭಗೊಳ್ಳಲಿದ್ದು, ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. 

ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯುಳ್ಳ ಕ್ಷೇತ್ರದ ಚುನಾವಣೆ ಜೂನ್‌ 3ರಂದು ನಡೆದಿತ್ತು. ನಾಲ್ಕು ಜಿಲ್ಲೆಗಳ 11,998 ಪುರುಷರು, 9,550 ಮಹಿಳೆಯರು, ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 21,549 ಮತದಾರರ ಪೈಕಿ 18,979 ಮಂದಿ ಮತ ಚಲಾಯಿಸಿದ್ದು, ಶೇ 88.07ರಷ್ಟು ಮತದಾನವಾಗಿದೆ.

ಇಲ್ಲಿ ಮತದಾರರಾಗಿರುವ ಪ್ರೌಢಶಾಲಾ ಶಿಕ್ಷಕರು, ಪಿಯು ಕಾಲೇಜುಗಳ ಉಪನ್ಯಾಸಕರು, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಬೋಧಕ ವರ್ಗದವರು ಯಾರಿಗೆ ಬೆಂಬಲ ನೀಡಿದ್ದಾರೆ ಎಂಬುದರ ಬಿಸಿ ಚರ್ಚೆಯೂ ನಡೆದಿದೆ.

ADVERTISEMENT

ದೊಡ್ಡ ಪ್ರಮಾಣದಲ್ಲಿ ಪಡೆದರೆ: ಇದು ಪ್ರಾಶಸ್ತ್ಯದ ಮತದಾನವಾಗಿರುವುದರಿಂದ, ‘ಪ್ರಥಮ ಪ್ರಾಶಸ್ತ್ಯ’ದ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿದವರು ‘ಗೆಲುವಿನ ಮನೆ’ ಪ್ರವೇಶಿಸಲಿದ್ದಾರೆ. ಫಲಿತಾಂಶ ಹೊರಬೀಳಲು ಸಾಕಷ್ಟು ಸಮಯವೂ ಬೇಕಾಗುತ್ತದೆ. ಬ್ಯಾಲೆಟ್‌ ಪೇಪರ್‌ಗಳನ್ನು ತೆರೆಯುತ್ತಾ ಹೋದಂತೆ ಅಭ್ಯರ್ಥಿಗಳ ‘ಮತ ಚಿತ್ರಣ’ ಸಿಗಲಿದೆ. ಮತ ಎಣಿಕೆ ಶುರುವಾಗಲು ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು, ಪಕ್ಷದವರು ಹಾಗೂ ಬೆಂಬಲಿಗರ ಎದೆಬಡಿತ ಜೋರಾಗಿದೆ.

ಮೂರು ಚುನಾವಣೆಗಳ ನಂತರ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮರಿತಿಬ್ಬೇಗೌಡ ಐದನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಬಂದಿರುವ ರಿಯಲ್‌ ಎಸ್ಟೇಟ್ ಉದ್ಯಮಿ, ಅರಣ್ಯ ವಸತಿ ಮತ್ತು ವಿಹಾರಧಾಮದ ಮಾಜಿ ಅಧ್ಯಕ್ಷ ಕೆ.ವಿವೇಕಾನಂದ ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿ. ಅನುಭವಿಗೆ ‘ಮತಾದೇಶ’ವೋ ಅಥವಾ ರಿಯಲ್‌ ಎಸ್ಟೇಟ್‌ ಉದ್ಯಮಿಗೆ ‘ಕೆಂಪುಹಾಸೋ’ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.

ಪರಿಣಾಮ ಆಗಿದೆಯೇ?: ಈ ಇಬ್ಬರೊಂದಿಗೆ, ಮಾಜಿ ಶಾಸಕರಾದ ಕೆ.ಸಿ. ಪುಟ್ಟಸಿದ್ದಶೆಟ್ಟಿ, ವಾಟಾಳ್ ನಾಗರಾಜ್‌, ನಿವೃತ್ತ ಡಿಡಿಪಿಯು ನಾಗಮಲ್ಲೇಶ್ ಸೇರಿದಂತೆ ಒಂಬತ್ತು ಮಂದಿ ಕಣದಲ್ಲಿದ್ದಾರೆ. ‘ಪ್ರಬುದ್ಧ ಮತದಾರರು’ ಯಾರಿಗೆ ಜೈ ಎಂದಿದ್ದಾರೆ, ಪ್ರಮುಖ ಪಕ್ಷಗಳಿಗೆ ಮಣೆ ಹಾಕಿದ್ದಾರೆಯೇ, ಇತರರಿಗೆ ಮನ್ನಣೆ ನೀಡಿದ್ದಾರೆಯೇ ಎಂಬುದು ಮತ ಎಣಿಕೆ ನಂತರ ಹೊರಬೀಳಲಿದೆ. ಸೋಲು–ಗೆಲುವಿನ ಲೆಕ್ಕಾಚಾರ, ವಿಶ್ಲೇಷಣೆಗಳಿಗೆ ತೆರೆ ಬೀಳಲಿದೆ.

ಟಿಕೆಟ್‌ ಹಂಚಿಕೆ ವಿಷಯದಲ್ಲಿ ಬಿಜೆಪಿ–ಜೆಡಿಎಸ್‌ ಪಾಳಯದಲ್ಲಿ ಉಂಟಾದ ಗೊಂದಲ, ಜೆಡಿಎಸ್‌ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಿಂದ ವ್ಯತಿರಿಕ್ತ ಪರಿಣಾಮ ಆಗಿದೆಯೇ? ಪಕ್ಷ ಬದಲಿಸಿದ್ದರಿಂದ ಮರಿತಿಬ್ಬೇಗೌಡರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬೆಲ್ಲ ಪ್ರಶ್ನೆಗಳಿಗೆ ಫಲಿತಾಂಶ ಉತ್ತರ ನೀಡಲಿದೆ.

ಕೆ. ವಿವೇಕಾನಂದ
ವಾಟಾಳ್ ನಾಗರಾಜ್
ಕೆ.ಸಿ. ಪುಟ್ಟಸಿದ್ದಶೆಟ್ಟಿ
ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆಗೆ ಮಾಡಿಕೊಂಡಿರುವ ಸಿದ್ಧತೆಯನ್ನು ಡಿಸಿಪಿ ಮುತ್ತುರಾಜ್ ಬುಧವಾರ ಪರಿಶೀಲಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು –ಪ್ರಜಾವಾಣಿ ಚಿತ್ರ

ಮೈಸೂರಿನಲ್ಲಿ ಮತ ಎಣಿಕೆ ಇಂದು ಎಣಿಕೆ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಸೋಲು–ಗೆಲುವಿನ ಲೆಕ್ಕಾಚಾರ, ವಿಶ್ಲೇಷಣೆಗಳಿಗೆ ಇಂದು ತೆರೆ

ಕುತೂಹಲಕ್ಕೆ ಕಾರಣಗಳಿವು...

ಲೋಕಸಭೆ ಚುನಾವಣೆಯಲ್ಲಿ ಮೈಸೂರು–ಕೊಡಗಿನಲ್ಲಿ ಬಿಜೆಪಿ ಮಂಡ್ಯದಲ್ಲಿ ಜೆಡಿಎಸ್ ಹಾಗೂ ಚಾಮರಾಜನಗರ ಮತ್ತು ಹಾಸನದಲ್ಲಿ ಕಾಂಗ್ರೆಸ್ ಗೆದ್ದಿದೆ. ‘ಈ ಭಾಗ’ದಲ್ಲಿ ಕಾಂಗ್ರೆಸ್ ಶಕ್ತಿ ವೃದ್ಧಿಸಿರುವುದು ಫಲಿತಾಂಶದ ನಂತರ ಬಹಿರಗಂಗೊಂಡಿದೆ. ಮೈಸೂರು ಮಂಡ್ಯ ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪ್ರತಿಕ್ರಿಯೆ ಏನಿರಲಿದೆ ಎಂಬುದೂ ಕುತೂಹಲ ಮೂಡಿಸಿದೆ. ಮರಿತಿಬ್ಬೇಗೌಡರು ಗೆದ್ದರೆ ಸತತ 5ನೇ ಗೆಲುವು ಕಂಡಂತಾಗುತ್ತದೆ; ಜತೆಗೆ ಯಾವುದೇ ಪಕ್ಷದ ಬೆಂಬಲದಿಂದ ಕಣಕ್ಕಿಳಿದರೂ ಯಶಸ್ಸು ಖಚಿತ ಎಂಬುದೂ ನಿಜವಾಗುತ್ತದೆ. ಜೆಡಿಎಸ್‌ನ ವಿವೇಕಾನಂದ ಗೆದ್ದರೆ ರಿಯಲ್‌ ಎಸ್ಟೇಟ್ ಉದ್ಯಮಿಯೊಬ್ಬರು ಮೇಲ್ಮನೆ ಪ್ರವೇಶಿಸದಂತಾಗುತ್ತದೆ. ಜೆಡಿಎಸ್‌ ಟಿಕೆಟ್‌ ವಂಚಿತರಾದ ಕೆ.ಟಿ. ಶ್ರೀಕಂಠೇಗೌಡ ಹಾಗೂ ಅವರ ಬೆಂಬಲಿಗರ ಪಾತ್ರವೇನು? ಬಿಜೆಪಿ ಟಿಕೆಟ್‌ ಘೋಷಣೆಯಾಗಿ ನಾಮಪತ್ರ ಸಲ್ಲಿಸಿ ವಾಪಸ್‌ ಪಡೆದುಕೊಂಡ ಈ.ಸಿ.ನಿಂಗರಾಜ್‌ ಗೌಡ ‘ಪ್ರಭಾವ’ ಕೆಲಸ ಮಾಡಿದೆಯೇ ಎಂಬುದನ್ನು ಕೂಡ ಫಲಿತಾಂಶ ಪ್ರತಿಫಲಿಸಲಿದೆ.

3 ಕ್ಷೇತ್ರಗಳ ಮತ ಎಣಿಕೆ ಇಲ್ಲೇ

‘ದಕ್ಷಿಣ ಶಿಕ್ಷಕರ ಕ್ಷೇತ್ರದೊಂದಿಗೆ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆಯೂ ಇಲ್ಲಿ ನಡೆಯಲಿದೆ. ಪ್ರತಿ ಕ್ಷೇತ್ರದ ಎಣಿಕೆ ಕಾರ್ಯಕ್ಕೆ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು ಹಾಗೂ ಇಬ್ಬರು ಸಹಾಯಕರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಸಹಾಯಕ ಚುನಾವಣಾ ಅಧಿಕಾರಿ ಕವಿತಾ ರಾಜಾರಾಂ ತಿಳಿಸಿದ್ದಾರೆ.

ಸ್ಪರ್ಧೆಯೊಡ್ಡಿದ ಅಭ್ಯರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.