ADVERTISEMENT

ಪಟೇಲ್‌ ಶಿವರಾಂ ಸೋಲಿನ ಏಟು ನೆನಪಿಟ್ಟುಕೊಂಡು ಹಾಸನ ಗೆದ್ದ ಜೆಡಿಎಸ್‌!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 11:42 IST
Last Updated 14 ಡಿಸೆಂಬರ್ 2021, 11:42 IST
ಮಾಜಿ ಪ್ರಧಾನಿ ದೇವೇಗೌಡ, ರೇವಣ್ಣ ಪುತ್ರ ಸೂರಜ್‌, ಶಾಸಕ ರೇವಣ್ಣ
ಮಾಜಿ ಪ್ರಧಾನಿ ದೇವೇಗೌಡ, ರೇವಣ್ಣ ಪುತ್ರ ಸೂರಜ್‌, ಶಾಸಕ ರೇವಣ್ಣ   

ಬೆಂಗಳೂರು: ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪಟೇಲ್‌ ಶಿವರಾಂ ಅವರು ಸೋತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮಾನಂದ ಆಗಿದೆ...’

ತಮ್ಮ ರಾಜಕೀಯ ಪ್ರಯೋಗಶಾಲೆಯಂತಿದ್ದ ಹಾಸನದಲ್ಲಿ 2015ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಎದುರಾಗಿದ್ದ ಸೋಲಿನಿಂದ ಆಕ್ರೋಶಗೊಂಡಿದ್ದ ದೇವೇಗೌಡರು ಅಂದು ಹೇಳಿದ್ದ ಮಾತಿದು. 2015ರ ಆ ಸೋಲಿನ ಏಟು ನೆನಪಿಟ್ಟುಕೊಂಡ ಜೆಡಿಎಸ್‌ ಈ ಬಾರಿ ತನ್ನ ಸಾಂಪ್ರದಾಯಿಕ ತಂತ್ರಗಾರಿಗೆ ಪ್ರಯೋಗಿಸಿ ಗೆದ್ದು ಬೀಗಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಈ ಬಾರಿ ನಡೆದ ಚುನಾವಣೆಯಲ್ಲಿ ಶಾಸಕ ಎಚ್‌.ಡಿ ರೇವಣ್ಣ ಅವರ ಪುತ್ರ ಸೂರಜ್‌ ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸಿ, ಕುಟುಂಬ ರಾಜಕಾರಣದ ತಂತ್ರ ಅನುಸರಿಸಿದ್ದ ಜೆಡಿಎಸ್‌ ಅಂತಿಮವಾಗಿ ಜಯಮಾಲೆ ಧರಿಸಿದೆ.

2242 ಮತಗಳನ್ನು ಗಳಿಸಿರುವ ಸೂರಜ್‌ ರೇವಣ್ಣ 1,433 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಸೂರಜ್‌ ಅವರ ಗೆಲುವಿನ ಅಂತರವು ಅವರ ಪ್ರತಿಸ್ಪರ್ಧಿಗಳು ಪಡೆದ ಮತಗಳಿಗಿಂತಲೂ ಅಧಿಕ. ಜೆಡಿಎಸ್‌ ನಾಯಕರು ತಳಮಟ್ಟದಲ್ಲಿ ಯಾವ ಮಟ್ಟಿಗೆ ಕೆಲಸ ಮಾಡಿರಬಹುದು ಎಂಬುದನ್ನು ಈ ಗೆಲುವಿನ ಅಂತರವು ಸಾಕ್ಷೀಕರಿಸುತ್ತಿದೆ.

ಏನದು ಜೆಡಿಎಸ್‌ಗೆ ಬಿದ್ದಿದ್ದ ಏಟು?

2015ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ಘೋಷಣೆದಾಗ ಸ್ವತಃ ದೇವೇಗೌಡರೇ ಹಾಸನದ ಸಂಸದರಾಗಿದ್ದರು. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್‌ನ 5 ಶಾಸಕರಿದ್ದರು. ಸ್ಥಳೀಯಾಡಳಿತಗಳಲ್ಲೂ ತಮ್ಮ ಪಕ್ಷದ ಪ್ರತಿನಿಧಿಗಳ ಪ್ರಾಬಲ್ಯವಿದ್ದರೂ ಜೆಡಿಎಸ್‌ ಅಭ್ಯರ್ಥಿ ಪಟೇಲ್‌ ಶಿವರಾಂ ಅವರು ಅಚ್ಚರಿ ಎಂಬಂತೆ ಸೋತುಹೋಗಿದ್ದರು. ಸಲೀಸಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರವನ್ನು ಅನಾಯಾಸವಾಗಿ ಬಿಟ್ಟುಕೊಟ್ಟ ಜೆಡಿಎಸ್‌ ಅಂದು ಮರ್ಮಾಘಾತ ಅನುಭವಿಸಿತ್ತು.

ಪಟೇಲ್ ಶಿವರಾಂ ಅವರ ಬದಲು ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರನ್ನು ಕಣಕ್ಕೆ ಇಳಿಸಬೇಕೆಂಬ ಬೇಡಿಕೆ ಅಂದು ಹುಟ್ಟಿತ್ತಾದರೂ, ಅದನ್ನು ಒಪ್ಪದ ದೇವೇಗೌಡರು ಪಟೇಲ್ ಶಿವರಾಂ ಅವರನ್ನೇ ಮರಳಿ ಕಣಕ್ಕೆ ಇಳಿಸಿದ್ದರು. ಜೆಡಿಎಸ್‌ ನಾಯಕರ ನಿರ್ಲಕ್ಷ್ಯ, ಪಟೇಲ್‌ ಶಿವರಾಂ ಅವರ ಹಳೇ ಶೈಲಿಯ ರಾಜಕಾರಣ, ಜೆಡಿಎಸ್‌ ಅನ್ನು ಸೋಲಿಸಲೇಬೇಕೆಂಬ ಸಿದ್ದರಾಮಯ್ಯ ಅವರ ಹಠ... ಇವೆಲ್ಲ ಕಾರಣಗಳಿಂದ ಜೆಡಿಎಸ್‌ ಅಂದು ಸೋತಿತ್ತು.

ಕೊನೆ ಕ್ಷಣದಲ್ಲಿ ಸೂರಜ್‌ ಕಣಕ್ಕೆ

ಕಳೆದ ಭಾರಿ ಎದುರಾದ ಮುಖಭಂಗ ತಪ್ಪಿಸಲು ಜೆಡಿಎಸ್‌ ಈ ಬಾರಿ ದೇವೇಗೌಡರ ಕುಟುಂಬಸ್ಥರನ್ನೇ ಕಣಕ್ಕಿಳಿಸಲು ತೀರ್ಮಾನಿಸಿತ್ತು. ಆರಂಭದಲ್ಲಿ ಭವಾನಿ ರೇವಣ್ಣ ಅವರು ಕಣಕ್ಕಿಳಿಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಸೂರಜ್‌ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಯಿತು.

‘ಕಾರ್ಯಕರ್ತರ ಅಭಿಲಾಷೆಯಂತೆ, ದೇವೇಗೌಡರ ಆಶಯದಂತೆ ಸೂರಜ್‌ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ,’ ಎಂದು ಶಾಸಕ ಎಚ್‌.ಡಿ ರೇವಣ್ಣ ಅವರೂ ಚುನಾವಣಾ ಪ್ರಚಾರದಲ್ಲಿ ಹಲವು ಬಾರಿ ಹೇಳಿದ್ದರು.

ಎಲ್ಲರ ಮನೆ ದೋಸೆ ತೂತು ಎಂದಿದ್ದ ಸೂರಜ್‌

ಕುಟುಂಬ ರಾಜಕಾರಣದ ಕುರಿತ ಪ್ರಶ್ನೆಯೊಂದಕ್ಕೆ ಇತ್ತೀಚೆಗೆ ಉತ್ತರಿಸಿದ್ದ ಸೂರಜ್‌ ರೇವಣ್ಣ, ‘ಕುಟುಂಬ ರಾಜಕಾರಣ ಕುರಿತು ಮಾತನಾಡುವವರ ಮನೆಯ ದೋಸೆಗಳೂ ತೂತಾಗಿವೆ’ ಎಂದಿದ್ದರು.
‘ಉತ್ತರ ಕರ್ನಾಟಕ, ಕನಕಪುರ ಸೇರಿ ದಂತೆ ಎಲ್ಲ ಭಾಗ ಗಳಲ್ಲೂ ಕುಟುಂಬ ರಾಜಕಾರಣ ಇದೆ. ಕೇವಲ ನಮ್ಮ ಬಗ್ಗೆ ಮಾತ್ರವೇ ಟೀಕೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.