ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸ್ಪಂದನಕ್ಕೆ ವಿಧಾನಸೌಧ ಸಜ್ಜು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 23:30 IST
Last Updated 7 ಫೆಬ್ರುವರಿ 2024, 23:30 IST
<div class="paragraphs"><p>ಮುಖ್ಯಮಂತ್ರಿಯವರ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕಾಗಿ ವಿಧಾನಸೌಧದ ಆವರಣದಲ್ಲಿ ನಡೆದಿರುವ ಸಿದ್ಧತೆ </p></div>

ಮುಖ್ಯಮಂತ್ರಿಯವರ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕಾಗಿ ವಿಧಾನಸೌಧದ ಆವರಣದಲ್ಲಿ ನಡೆದಿರುವ ಸಿದ್ಧತೆ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದ ಜನರ ದೂರು ಹಾಗೂ ಮನವಿಗಳನ್ನು ನೇರವಾಗಿ ಸ್ವೀಕರಿಸಿ, ಪರಿಹಾರ ಒದಗಿಸುವ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಇಡೀ ದಿನ ಜನರ ಅಹವಾಲು ನಡೆಸಲಿದ್ದಾರೆ.

ADVERTISEMENT

ಇದು ಮುಖ್ಯಮಂತ್ರಿಯವರ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೂ ಮುಖ್ಯಮಂತ್ರಿಯವರು ಸಾರ್ವಜನಿಕರ ಅಹವಾಲು ಆಲಿಸುವರು.

ವಿಧಾನಸೌಧದ ಆವರಣದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಿಧಾನಸೌಧದ ಒಳಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಶಾಮಿಯಾನ ಅಳವಡಿಸಿ ನೆರಳಿನ ಸೌಲಭ್ಯ ಕಲ್ಪಿಸಲಾಗಿದೆ.

ಇಲಾಖಾವಾರು ಸಹಾಯ ಕೇಂದ್ರ: ಸಾರ್ವಜನಿಕರಿಂದ ದೂರು ಮತ್ತು ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಜನಸ್ಪಂದನಕ್ಕೆ ಬರುವ ನಾಗರಿಕರು ಆಯಾ ಇಲಾಖೆಯ ಸಹಾಯ ಕೇಂದ್ರಕ್ಕೆ ತೆರಳಿ ತಮ್ಮ ದೂರು ಅಥವಾ ಮನವಿಗಳನ್ನು ಸಲ್ಲಿಸಬೇಕು ಎಂದು ಮುಖ್ಯಮಂತ್ರಿಯವರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸ್ವಾಗತ ಕೇಂದ್ರ ಮತ್ತು ಮುಖ್ಯಮಂತ್ರಿಯವರ ವೇದಿಕೆಗಳ ಜತೆಗೆ ಇಲಾಖಾವಾರು 28 ಸಹಾಯ ಕೇಂದ್ರಗಳು ಇರಲಿವೆ. ಎಲ್ಲ ಇಲಾಖೆಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ವಿಧಾನಸೌಧದ ಆವರಣ ಪ್ರವೇಶಿಸುವ ನಾಗರಿಕರನ್ನು ವಿಚಾರಿಸಿ, ನಿರ್ದಿಷ್ಟ ಸಹಾಯ ಕೇಂದ್ರಕ್ಕೆ ಕಳುಹಿಸುವ ಕೆಲಸವನ್ನು ಈ ಅಧಿಕಾರಿಗಳು ಮಾಡುತ್ತಾರೆ. ಅಲ್ಲಿ ಇಲಾಖೆಯ ಕಾರ್ಯದರ್ಶಿ, ಅಧೀನ ಇಲಾಖೆಯ ಮುಖ್ಯಸ್ಥರು ಮತ್ತು ಸಚಿವಾಲಯದ ಸಿಬ್ಬಂದಿ ಅಹವಾಲು ಸ್ವೀಕರಿಸುತ್ತಾರೆ ಎಂದು ಮಾಹಿತಿ ನೀಡಿದೆ.

3,738 ಅರ್ಜಿ ವಿಲೇವಾರಿ: 2023ರ ನವೆಂಬರ್ 27ರಂದು ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ಮೊದಲ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದರು. ಆಗ, 4,030 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈವರೆಗೆ 3,738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಮುಖ್ಯಮಂತ್ರಿಯವರ ಸಚಿವಾಲಯ ತಿಳಿಸಿದೆ.

ಏನೆಲ್ಲಾ ಸೌಲಭ್ಯಗಳು ಇರಲಿವೆ?

* ವೃದ್ಧರು ಹಿರಿಯ ನಾಗರಿಕರು ಅಂಗವಿಕಲರು ಮತ್ತು ಗರ್ಭಿಣಿಯರಿಗಾಗಿ ಬ್ಯಾಟರಿ ಚಾಲಿತ ಬಗ್ಗಿ ಹಾಗೂ ಗಾಲಿ ಕುರ್ಚಿಗಳು

* ಜನಸ್ಪಂದನಕ್ಕೆ ಬರುವ ನಾಗರಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹತ್ತು ಸಾವಿರ ಮಂದಿಗೆ ಊಟ ಪೂರೈಕೆಗೆ ಸಿದ್ಧತೆ

* ಜನಸ್ಪಂದನಕ್ಕೆ ಬರುವ ಸಾರ್ವಜನಿಕರು ಮತ್ತು ಅಂಗವಿಕಲರಿಗಾಗಿ ಶೌಚಾಲಯ ವ್ಯವಸ್ಥೆ

* ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಬಿಎಂಟಿಸಿ ವತಿಯಿಂದ ಉಚಿತ ಬಸ್‌ ಪ್ರಯಾಣದ ವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.