ಬೆಂಗಳೂರು: ‘ವಿದ್ಯಾಗಮ’ ಯೋಜನೆಗಳಲ್ಲಿ ಕೆಲವು ಬದಲಾವಣೆ ತಂದು, ಮನೆಯಿಂದಲೇ ಈ ಯೋಜನೆಯ ಕೆಲಸಗಳನ್ನು ನಿರ್ವಹಿಸಲು ಅವಕಾಶ ನೀಡಬೇಕು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ.
‘ವಿದ್ಯಾಗಮ ಯೋಜನೆ ಅನುಷ್ಠಾನದ ಕುರಿತು ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರು 21 ಪುಟಗಳ ಸುತ್ತೋಲೆ ಹೊರಡಿಸಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಶಿಕ್ಷಕರು ಶಾಲೆಗೆ ತೆರಳಿ ಈ ಕಾರ್ಯ ನಿರ್ವಹಿಸುವುದು ಯೋಗ್ಯವಲ್ಲ’ ಎಂದು ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ಹೇಳಿದ್ದಾರೆ.
‘ಸಾಮಾಜಿಕ ಮಾಧ್ಯಮಗಳು ಅಥವಾ ಮೊಬೈಲ್ ಫೋನ್ ಮೂಲಕವೇ ಈ ಯೋಜನೆಯ ಕಾರ್ಯಚಟುವಟಿಕೆಯನ್ನು ಮಾಡಲು ಸಾಧ್ಯವಿದೆ. ಮನೆಯಿಂದಲೇ ಕೆಲಸ ಮಾಡಲು ಶಿಕ್ಷಕರು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಜೋರು ಮಳೆ ಸುರಿಯುತ್ತಿರುವುದರಿಂದ ಹಳ್ಳಿಗಳಿಗೆ ತೆರಳಿ, ಶಿಕ್ಷಕರು ಮಾರ್ಗದರ್ಶನ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಈ ನಿಟ್ಟಿನಲ್ಲಿ, ವಾಟ್ಸ್‌ಆ್ಯಪ್ ಗುಂಪುಗಳ ಮೂಲಕವೇ ಬೋಧಿಸಲು ಅವಕಾಶ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.