ADVERTISEMENT

ಗಣರಾಜ್ಯೋತ್ಸವದಲ್ಲಿ ‘ವಿಜಯನಗರ ವೈಭವ’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಜನವರಿ 2021, 19:30 IST
Last Updated 23 ಜನವರಿ 2021, 19:30 IST
ವಿಜಯನಗರ ವೈಭವ ಬಿಂಬಿಸುವ ಸ್ತಬ್ಧಚಿತ್ರದ ಕಿರು ಪ್ರತಿಕೃತಿ
ವಿಜಯನಗರ ವೈಭವ ಬಿಂಬಿಸುವ ಸ್ತಬ್ಧಚಿತ್ರದ ಕಿರು ಪ್ರತಿಕೃತಿ   

ಹೊಸಪೇಟೆ: ಗಣರಾಜ್ಯೋತ್ಸವದ ಪ್ರಯುಕ್ತ ನವದೆಹಲಿಯ ರಾಜಪಥದಲ್ಲಿ ಜ.26ರಂದು ನಡೆಯಲಿರುವ ಪಥಸಂಚಲನದಲ್ಲಿ ಈ ಸಲ ವಿಜಯನಗರ ಸಾಮ್ರಾಜ್ಯದ ವೈಭವ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯಲಿರುವುದು ವಿಶೇಷ.

ವಿಜಯನಗರ ಜಿಲ್ಲೆ ರಚನೆಯ ಸಂದರ್ಭದಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಅದರ ಗತವೈಭವ ಬಿಂಬಿಸಲು ಮುಂದಾಗಿರುವುದು ಮತ್ತೊಂದು ವಿಶೇಷ.

ತನ್ನ ಶ್ರೀಮಂತಿಕೆ, ಉತ್ಕೃಷ್ಟ ವಾಸ್ತುಶಿಲ್ಪದ ಮೂಲಕ ವಿಜಯನಗರ ಸಾಮ್ರಾಜ್ಯ ಇಡೀ ಜಗತ್ತಿನ ಗಮನ ಸೆಳೆದಿತ್ತು. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ನೋಡಲು ಈಗಲೂ ದೇಶ–ವಿದೇಶಗಳಿಂದ ಜನ ಬರುತ್ತಾರೆ. ಆ ಸಾಮ್ರಾಜ್ಯದ ಕುರುಹುಗಳನ್ನು ಮರುಸೃಷ್ಟಿ ಮಾಡಿ, ಜನರ ಮುಂದೆ ಪ್ರದರ್ಶಿಸಿ ಅದರ ಚರಿತ್ರೆ ಸಾರಲು ರಾಜ್ಯ ಸರ್ಕಾರ ಮುಂದಾಗಿದೆ.

ADVERTISEMENT

ಹಂಪಿಯ ಕಲ್ಲಿನ ರಥ, ವಿಜಯ ವಿಠಲ ದೇವಸ್ಥಾನದ ಸಪ್ತಸ್ವರ ಮಂಟಪ, ಉಗ್ರ ನರಸಿಂಹ ಸ್ಮಾರಕ, ಅಂಜನಾದ್ರಿ ಬೆಟ್ಟದ ಮೇಲೆ ಹನುಮಂತ ನಿಂತಿರುವುದನ್ನು ಸ್ತಬ್ಧಚಿತ್ರ ಒಳಗೊಂಡಿರಲಿದೆ. ಇದರ ಜತೆಗೆ ಹಂಪಿಯ ಶ್ರೀಮಂತಿಕೆ ಕಣ್ತುಂಬಿಕೊಳ್ಳುತ್ತಿರುವ ವಿದೇಶಿ ಪ್ರವಾಸಿಗರ ವೇಷಧಾರಿಗಳು, ಸಿಂಹಾಸನರೂಢ ಶ್ರೀಕೃಷ್ಣದೇವರಾಯ, ಆತನ ಸೈನ್ಯದ ಅನಾವರಣವೂ ಆಗಲಿದೆ.

ಖ್ಯಾತ ಕಲಾ ನಿರ್ದೇಶಕ ಶಶಿಧರ್‌ ಅಡಪ ಹಾಗೂ ಅವರ ತಂಡದವರು ಈಗಾಗಲೇ ಸ್ತಬ್ಧಚಿತ್ರಕ್ಕೆ ಅಂತಿಮ ರೂಪ ನೀಡಿದ್ದಾರೆ. ಪ್ರವೀಣ್‌ ಡಿ. ರಾವ್‌ ಹಾಗೂ ತಂಡ ಹಿನ್ನೆಲೆ ಸಂಗೀತ ನೀಡಿದೆ. ಈಗಾಗಲೇ ಸ್ತಬ್ಧಚಿತ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ರಾಜಪಥದಲ್ಲಿ ನಡೆಯುತ್ತಿರುವ ತಾಲೀಮಿನಲ್ಲೂ ಭಾಗವಹಿಸಿದೆ ಎಂದು ಮೂಲಗಳು ತಿಳಿಸಿವೆ.

‘ಈ ಹಿಂದೆ ಗಣರಾಜ್ಯೋತ್ಸವದಲ್ಲಿ ಹಂಪಿಯ ಕಲ್ಲಿನ ರಥದ ವೈಭವವಷ್ಟೇ ಅನಾವರಣಗೊಂಡಿತ್ತು. ಈ ಸಲ ಹಂಪಿಯ ಅನೇಕ ಸ್ಮಾರಕಗಳು ಅಲ್ಲಿ ಗಮನ ಸೆಳೆಯಲಿವೆ’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಮ್ಮ ವಿಜಯನಗರ ನಮ್ಮ ಹೆಮ್ಮೆ’
‘ಈ ಸಲದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ವಿಜಯನಗರ ವೈಭವದ ಸ್ತಬ್ಧಚಿತ್ರಕ್ಕೆ ಆದ್ಯತೆ ಕೊಟ್ಟಿರುವುದು ಖುಷಿಯ ಸಂಗತಿ. ನಮ್ಮ ವಿಜಯನಗರ ನಮ್ಮ ಹೆಮ್ಮೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಸಂತಸ ವ್ಯಕ್ತಪಡಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲಿನಿಂದಲೂ ಹಂಪಿ ಬಗ್ಗೆ ವಿಶೇಷ ಕಾಳಜಿ ಇದೆ. ಹಂಪಿಯನ್ನು ಪಾರಂಪರಿಕ ನಗರ ಮಾಡುವ ಭರವಸೆಯೂ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಅದನ್ನು ಮಾಡುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.