ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಮರಳಿ ಬಿಜೆಪಿ ಸೇರಿದ್ದಾರೆ.
ಈ ಬೆಳವಣಿಗೆಯಿಂದ ಹುಣಸೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಆಗುತ್ತದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ಅನರ್ಹ ಶಾಸಕ ಎಚ್.ವಿಶ್ವನಾಥ್ ಈ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಬಿಜೆಪಿ ಅವರಿಗೆ ಟಿಕೆಟ್ ಕೊಡುವ ಭರವಸೆ ನೀಡಿದೆ.
ವಿಜಯಶಂಕರ್ ಈ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಅವರಿಗೆ ಈ ಬಾರಿ ಟಿಕೆಟ್ ನೀಡುವುದಿಲ್ಲ. ಬದಲಿಗೆ ಅವರಿಗೆ ನಿಗಮ– ಮಂಡಳಿಯಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ. ಸಿ.ಪಿ.ಯೋಗೀಶ್ವರ್ ಅವರ ಹೆಸರು ಕೇಳಿ ಬಂದಿದೆ. ಆದರೆ, ಟಿಕೆಟ್ ನೀಡುವ ಸಾಧ್ಯತೆಯೂ ಇಲ್ಲ. ಸ್ಪರ್ಧೆಯ ಬಗ್ಗೆ ಯೋಗೀಶ್ವರ್ ಆಸಕ್ತಿ ತೋರಿಸಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷ ಸೇರ್ಪಡೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿಜಯಶಂಕರ್ ಅವರಿಗೆ ಪಕ್ಷದ ಬಾವುಟ ನೀಡಿ, ಪಕ್ಷಕ್ಕೆ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ವಿಜಯಶಂಕರ್ ಪಕ್ಷಕ್ಕೆಸೇರಿರುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಂಘಟನೆ ಬಲಗೊಳ್ಳಲಿದೆ. ಈ ಭಾಗದ ಅಭಿವೃದ್ಧಿಗೆ ಕೈಗೊಳ್ಳುವ ಕಾರ್ಯಗಳಿಗೂ ಸಹಕಾರಿಯಾಗಲಿದೆ ಎಂದರು.
ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಷ್ಟ್ರದ ಹಿತದೃಷ್ಟಿಯಿಂದ ಬಿಜೆಪಿ ವಿಚಾರ ಧಾರೆಯೇ ಒಳಿತು ಎಂಬ ತೀರ್ಮಾನದೊಂದಿಗೆ ವಿಜಯಶಂಕರ್ ಪಕ್ಷಕ್ಕೆ ಮರಳಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷದ ಸಂಘಟನೆ ಬಲಗೊಳ್ಳಲಿದೆ ಎಂದು ಹೇಳಿದರು.
ವಿಜಯಶಂಕರ್ ಮಾತನಾಡಿ, ಕಾರಣಾಂತರಗಳಿಂದ ಪಕ್ಷ ತೊರೆದಿದ್ದೆ. ಪಕ್ಷದಲ್ಲಿ ಸಂಸದ, ಶಾಸಕ ಮತ್ತು ಸಚಿವನಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೆ. ಮುಂದೆಯೂ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆ. ಇನ್ನೆಂದಿಗೂ ಪಕ್ಷ ತೊರೆಯುವುದಿಲ್ಲ. ಕೊನೆಯವರೆಗೂ ಪಕ್ಷದಲ್ಲಿದ್ದು ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.