ADVERTISEMENT

ರಾಹುಲ್‌ ಗಾಂಧಿ ಕ್ಷಮೆಯಾಚನೆಗೆ ವಿಜಯೇಂದ್ರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:31 IST
Last Updated 2 ಜುಲೈ 2024, 16:31 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ ಗಾಂಧಿ ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ. ಮೂರೂ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾಗಿರುವ ರಾಹುಲ್‌ ಗಾಂಧಿ ಇದೇ ಮೊದಲ ಬಾರಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ತಮ್ಮ ಸ್ಥಾನದ ಜವಾಬ್ದಾರಿ ಮರೆತು ಮೊದಲ ಭಾಷಣದಲ್ಲೇ ಸುಳ್ಳು, ನಿರಾಶೆ, ಆಧಾರರಹಿತ ಆರೋಪ ಮಾಡಿದ್ದಾರೆ. ಅವರ ನಡವಳಿಕೆ ಸಂಸತ್ತಿನ ನಿಯಮಗಳಿಗೆ ಧಕ್ಕೆ ತರುವಂತೆ ಇತ್ತು ಎಂದು ದೂರಿದರು.

ರಾಹುಲ್ ತಮ್ಮ ಭಾಷಣದಲ್ಲಿ ‘ಹಿಂದೂಗಳು ಹಿಂಸಾಚಾರ ಮತ್ತು ದ್ವೇಷದಲ್ಲಿ ಹಗಲಿರುಳು ನಿರತರು’ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ದೇಶದ ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಅಗ್ನಿವೀರರು, ರೈತರು, ಅಯೋಧ್ಯೆ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲ ಮಾತುಗಳಲ್ಲೂ ಸುಳ್ಳು ಹೇಳಿದ್ದಾರೆ ಎಂದರು.

ADVERTISEMENT

ಸಿಖ್‌ ಹತ್ಯಾಕಾಂಡ, ತುರ್ತು ಪರಿಸ್ಥಿತಿಗೆ ಯಾರು ಕಾರಣ ಎಂದು ರಾಹುಲ್‌ ಸ್ಪಷ್ಟಪಡಿಸಬೇಕು. ದೇಶದ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿಯವರು ಮತಾಂತರ ಮಾಫಿಯಾದ ಕೈಗೊಂಬೆಯಾಗಿ ಸದನದಲ್ಲಿ ಹಿಂದೂ ವಿರೋಧಿಯಾಗಿ ಹೇಳಿಕೆ ಕೊಟ್ಟಿರುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.