ಬೆಂಗಳೂರು: ಗ್ರಾಮ ಆಡಳಿತಾಧಿಕಾರಿ (ವಿಎಒ) ಹಾಗೂ ಜಿಟಿಟಿಸಿಯ ವಿವಿಧ ಹುದ್ದೆಗಳ ನೇಮಕಾತಿಗೆ ಸೆ.29ರಂದು ನಡೆಸಿದ್ದ ಕನ್ನಡ ಕಡ್ಡಾಯ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.
ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಕೆಇಎ ವೆಬ್‌ಸೈಟ್ ಲಿಂಕ್‌ನಲ್ಲಿ ನಮೂದಿಸಿ, ಫಲಿತಾಂಶವನ್ನು ಪಡೆಯಬಹುದು ಎಂದು ಪ್ರಾಧಿಕಾರ ಹೇಳಿದೆ.
ಒಟ್ಟು 150 ಅಂಕಗಳ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್ 27ರಂದು ನಡೆಯುವ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ.
ರಾಜ್ಯದ 1,410 ಕೇಂದ್ರಗಳಲ್ಲಿ ಸೆ.29ರಂದು ಪರೀಕ್ಷೆ ನಡೆದಿತ್ತು. ಒಟ್ಟು 5.75 ಲಕ್ಷ ಅಭ್ಯರ್ಥಿಗಳಲ್ಲಿ 4.53 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ವಯೋಮಿತಿ ಸಡಿಲಿಕೆಯ ಅನುಕೂಲ ಪಡೆಯುವವರ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ. 26ರಂದು ಕನ್ನಡ ಕಡ್ಡಾಯ ಪರೀಕ್ಷೆ ಇರುತ್ತದೆ. ಆ ನಂತರ ಅವರು ಕೂಡ ಅ.27ರಂದು ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.