ಸಾಗರ; ‘ಭಾರತದ ಗ್ರಾಮಗಳಲ್ಲಿ ಶೇ 60, ನಗರ ಪ್ರದೇಶದಲ್ಲಿ ಶೇ 20 ಕೈ ಕಸುಬುದಾರರಿದ್ದು, ಅವರನ್ನು ಬಲಪಡಿಸದಿದ್ದರೆ ನಮ್ಮ ದೇಶ ನಾಶವಾಗಲಿದೆ’ ಎಂದು ದೇಸಿ ಚಿಂತಕ ಪ್ರಸನ್ನ ಹೇಳಿದರು.
ತಾಲ್ಲೂಕಿನ ಹೆಗ್ಗೋಡಿನಲ್ಲಿ ಚರಕ, ಗ್ರಾಮ ಸೇವಾ ಸಂಘ, ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟದ ವತಿಯಿಂದ ಶುಕ್ರವಾರ ನಡೆದ ‘ಗ್ರಾಮೋದ್ಯೋಗ ಉಳಿಸಿ’ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸ್ವಾತಂತ್ರ್ಯ ನಂತರ ಹಳ್ಳಿಗಳನ್ನು ಬಲಪಡಿಸಲು ಒತ್ತು ನೀಡಿಲ್ಲ. ಈಗ ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತೆ ಆ ಕೆಲಸ ಜನಾಂದೋಲನದ ರೂಪ ಪಡೆಯಬೇಕಿದೆ. ಸರ್ಕಾರ ಒತ್ತು ನೀಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅಂಬಾನಿ, ಮಲ್ಯರಂತಹವರಿಗೆ ಒತ್ತುನೀಡಿದ್ದರಿಂದಾಗಿ ಜಿಡಿಪಿಇಂದು ಪಾತಾಳಕ್ಕೆ ಕುಸಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ಜನಪ್ರತಿನಿಧಿಗಳು ನಗರಗಳಲ್ಲಿ ನೆಲೆಸಿ ವಾರಾಂತ್ಯಕ್ಕೆ ಹಳ್ಳಿಗೆ ಬರುತ್ತಾರೆ. ಇದರ ಬದಲು ಅವರು ಆರು ದಿನ ಹಳ್ಳಿಯಲ್ಲಿ ನೆಲೆಸಿ ವಾರಾಂತ್ಯಕ್ಕೆ ನಗರಕ್ಕೆ ಹೋದರೆ ರಾಕ್ಷಸಿ ಸ್ವರೂಪದ ಆರ್ಥಿಕತೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.
‘ಕಳೆದ ಆರು ತಿಂಗಳಿನಿಂದ ಕೊರೊನಾ ಕಾರಣಕ್ಕೆ ಜನರು ಮಾತನಾಡದ ಸ್ಥಿತಿ ತಲುಪಿದ್ದಾರೆ. ಸರ್ಕಾರ ಧ್ವನಿ ಅಡಗಿಸುವುದಕ್ಕೇ ಮುಖಗವಸು ಧರಿಸಲು ಸೂಚಿಸಿರುವಂತೆ ಕಾಣುತ್ತಿದೆ. ಆದಾಗ್ಯೂ ಈ ಭಾಗದ ಮಹಿಳೆಯರು ಸರ್ಕಾರಕ್ಕೆ ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಮಹಿಳೆಯರೇ ಈ ಚಳವಳಿಯನ್ನೂ ಮುಂದುವರಿಸುತ್ತಾರೆ. ದುಡಿಯುವ ವರ್ಗಕ್ಕೆ ಮೋಸ ಮಾಡಿದವರಿಗೆ ಜನರು ಬರಲಿರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.