ADVERTISEMENT

ತೆರಿಗೆ ಪರಿಷ್ಕರಣೆಗೆ ಗ್ರಾಮ ಆಸ್ತಿ ಸಮೀಕ್ಷೆ?

ಕೃಷಿಯೇತರ ಎಲ್ಲ ಆಸ್ತಿಗಳನ್ನೂ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 22:00 IST
Last Updated 10 ಆಗಸ್ಟ್ 2022, 22:00 IST
   

ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೃಷಿಯೇತರ ಭೂಮಿ, ಕಟ್ಟಡಗಳ ಸಮೀಕ್ಷೆ ನಡೆಸಿ, ವೈಜ್ಞಾನಿಕವಾಗಿ ತೆರಿಗೆ ನಿಗದಿ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದು, 3 ತಿಂಗಳ ಗಡುವು ನೀಡಿದೆ.

ತುಮಕೂರು ಜಿಲ್ಲೆಯ 330 ಪಂಚಾಯಿತಿಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಸಮೀಕ್ಷೆ ನಡೆಸಲಾಗಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದ ಎಲ್ಲ ಆಸ್ತಿಗಳಿಗೂ ತೆರಿಗೆ ನಿಗದಿ ಮಾಡಲಾಗಿದೆ. ಇದೇ ಮಾದರಿಯನ್ನು ರಾಜ್ಯದ ಇತರೆ ಜಿಲ್ಲೆಗಳ 5,619 ಪಂಚಾಯಿತಿಗಳಲ್ಲೂ ಅನುಸರಿಸಲು ನಿರ್ಧರಿಸಲಾಗಿದೆ.

ಆಸ್ತಿಗಳ ಸಮೀಕ್ಷೆಗೆ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಗಳ ಸಂಕೇತ ಒಳಗೊಂಡ ಮುದ್ರಿತ ವಿಶಿಷ್ಟ ಗುರುತಿನ ಕ್ರಮಸಂಖ್ಯೆ ಒಳಗೊಂಡ ನಮೂನೆಗಳನ್ನು ಬಳಸಬೇಕು. ಸಮೀಕ್ಷೆ ಖಾತರಿಗೆ ಪಂಚಾಯತ್‌ರಾಜ್ ಆಯುಕ್ತಾಲಯದ ಹಾಲೋಗ್ರಾಮ್‌
ಗಳನ್ನು ಕಡ್ಡಾಯವಾಗಿ ಬಳಸಬೇಕು. ಆಸ್ತಿ ಸಮೀಕ್ಷೆಯ ಖರ್ಚುಗಳನ್ನು ಪಂಚಾಯಿತಿಗಳು ತಮ್ಮ ಸ್ವಂತ ನಿಧಿ, 14 ಅಥವಾ 15ನೇ ಹಣಕಾಸು ಅನು ದಾನದಲ್ಲಿ ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ADVERTISEMENT

ಪಂಚತಂತ್ರ 2.0ನಲ್ಲಿ ಆಸ್ತಿಗಳ ಮಾಲೀಕರು ಸ್ವಯಂಚಾಲಿತ ತೆರಿಗೆ ಲೆಕ್ಕಾಚಾರದ ಮೂಲಕ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸ್ವತ್ತು ತಂತ್ರಾಂಶ ಅಳವಡಿಸಿರುವುದರಿಂದ ಮಾಲೀಕರು ಆಸ್ತಿ ದಾಖಲೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.ಈ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಲು ಪಂಚಾಯತ್‌ರಾಜ್ ಆಯಕ್ತಾಲಯದ ನಿರ್ದೇಶಕರನ್ನು ರಾಜ್ಯ ನೋಡಲ್‌ ಅಧಿಕಾರಿಯಾಗಿ, ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾರ್ಯದರ್ಶಿಗಳನ್ನು ಜಿಲ್ಲಾ ನೋಡಲ್‌ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ.

ಆಸ್ತಿ ಸಮೀಕ್ಷೆ ಹೇಗೆ?

ಪ್ರತಿ ಗ್ರಾಮದ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಅಧಿಕಾರಿಗಳ ಜತೆ ಜಂಟಿ ಸಮೀಕ್ಷೆ ನಡೆಸಬೇಕು. ನಿಗದಿತ ನಮೂನೆಯಲ್ಲಿ ಆಸ್ತಿಗಳು, ಮಾಲೀಕರ ವಿವರ ಸಂಗ್ರಹಿಸಬೇಕು. ಗ್ರಾಮ ಠಾಣಾ, ಭೂ ಪರಿ ವರ್ತಿತ ಜಮೀನು, ವಿನ್ಯಾಸ ನಕ್ಷೆ ಅನುಮೋದಿತ ಬಡಾವಣೆ, ಸರ್ಕಾರದ ವಸತಿ ಯೋಜನೆ, ಸಾರ್ವಜನಿಕ ಆಸ್ತಿಗಳನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ಎಲ್ಲ ದಾಖಲೆಗಳ ಪ್ರತಿಗಳನ್ನು ಸಂಗ್ರಹಿಸಬೇಕು. ಮಾಲೀಕರ ಸಮ್ಮುಖದಲ್ಲೇ ದಾಖಲೆಗಳ ವಿವರ ಹಾಗೂ ಅವರ ಆಸ್ತಿ ತೆರಿಗೆ ದೃಢೀಕರಿಸಬೇಕು. ಕ್ರಮಬದ್ಧ ಆಸ್ತಿ ವಿವರಗಳನ್ನು ನಮೂನೆ 9 ಹಾಗೂ 11 ‘ಎ’ ನಲ್ಲಿ, ಕ್ರಮ ಬದ್ಧವಲ್ಲದ ಆಸ್ತಿಗಳ ವಿವರಗಳನ್ನು 11 ‘ಬಿ’ ನಲ್ಲಿ ದಾಖಲಿಸಬೇಕು. ನಂತರ ಇಲಾಖೆಯ ಪಂಚತಂತ್ರ 2.0ದಲ್ಲಿ ಅಳವಡಿಸಬೇಕು.

ಸಮೀಕ್ಷೆಯಲ್ಲಿ ಭಾಗವಹಿಸುವವರು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಪಂಚಾಯಿತಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ.

ಹೊರಗುತ್ತಿಗೆ ನೌಕರರು, ಸ್ವಸಹಾಯ ಸಂಘಗಳು, ಸರ್ಕಾರೇತರ ಸಂಸ್ಥೆಗಳು.

ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು, ಸಿಇಒ ಮೇಲ್ವಿಚಾರಣೆ ನೋಡಿಕೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.