ADVERTISEMENT

ನಿವೃತ್ತ ಶಿಕ್ಷಕರಿಗೆ ಗ್ರಾಮಸ್ಥರಿಂದ 5 ತೊಲೆ ಬಂಗಾರ, 2 ಕೆ.ಜಿ ಬೆಳ್ಳಿ ಕೊಡುಗೆ

ಅದ್ಧೂರಿ ಬೀಳ್ಕೊಡುಗೆ; ಸೇವೆ ನೆನೆದು ಭಾವುಕರಾದ ಬಿಜ್ಜರಗಿ ಗ್ರಾಮಸ್ಥರು

ಪರಮೇಶ್ವರ ಎಸ್.ಜಿ.
Published 1 ಅಕ್ಟೋಬರ್ 2022, 13:40 IST
Last Updated 1 ಅಕ್ಟೋಬರ್ 2022, 13:40 IST
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಬಿ.ಎ.ಕೆ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎನ್.ಜಿ.ಕೊಟ್ನಾಳ ಅವರನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ಮೆರವಣಿಗೆ ಮಾಡುವ ಮೂಲಕ ಬಿಳ್ಕೊಟ್ಟರು.
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಬಿ.ಎ.ಕೆ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎನ್.ಜಿ.ಕೊಟ್ನಾಳ ಅವರನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ಮೆರವಣಿಗೆ ಮಾಡುವ ಮೂಲಕ ಬಿಳ್ಕೊಟ್ಟರು.   

ತಿಕೋಟಾ(ವಿಜಯಪುರ):ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಬಿ.ಎ.ಕೆ.ಪ್ರೌಢಶಾಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ಶುಕ್ರವಾರ ನಿವೃತ್ತ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕ ಎನ್.ಜಿ.ಕೊಟ್ಯಾಳ ಅವರಿಗೆ ಗ್ರಾಮಸ್ಥರು ಅಭೂತಪೂರ್ವವಾಗಿ ಬೀಳ್ಕೊಟ್ಟರು.

ಗ್ರಾಮದ ಸಾವಿರಾರು ಜನರು, ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು, ಎಲ್ಲ ಸಮುದಾಯದವರು ಒಟ್ಟುಗೂಡಿ ಕೊಟ್ಯಾಳ ಗುರುಗಳ ತಲೆಗೆ ರುಮಾಲು, ದೋತಿ, ನೆಹರು ಶರ್ಟ್‌ ತೊಡಸಿತೆರೆದ ವಾಹನದಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿದರು.

ಗುರು ಕಾಣಿಕೆ:

ADVERTISEMENT

ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರಿಂದ 5 ತೊಲೆ ಬಂಗಾರ, 2 ಕೆಜಿ ಬೆಳ್ಳಿ ಮೂರ್ತಿಗಳು, ಡಬಲ್ ಡೋರ್ ಪ್ರೀಡ್ಜ್‌, 32 ಇಂಚ್ ಎಲ್ಇಡಿ ಟಿವಿ, ಕಂಚಿನ ಸರಸ್ವತಿ ಮೂರ್ತಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ 25 ಭಾವಚಿತ್ರ, ಬುದ್ದನ ಮೂರ್ತಿ, ಬೆಲೆಬಾಳುವ ಕಂಬಳಿ ಹಾಗೂ ಕನಕದಾಸ ಭಾವಚಿತ್ರ, ಬುದ್ದ, ಬಸವಣ್ಣ,‌ ಅಂಬೇಡ್ಕರ್‌ ಮಹಾನಾಯಕರ ಹಾಗೂ ಪರಿಸರ ಚಿತ್ರಗಳನ್ನು ಕಾಣಿಕೆಯಾಗಿ ನೀಡಿದರು.

ಗ್ರಾಮಸ್ಥರಿಂದ ಕಾಣಿಕೆಯಾಗಿ ಬಂದ ₹96 ಸಾವಿರ ನಗದು ಹಾಗೂ ವೈಯಕ್ತಿಕವಾಗಿ ತಮ್ಮ ತಂದೆ ಗುರಪ್ಪ ಹಾಗೂ ತಾಯಿ ಲಕ್ಷ್ಮೀಬಾಯಿ ಅವರ ಸ್ಮರಣಾರ್ಥ ಪ್ರೌಢಶಾಲೆಗೆ ₹ 25 ಸಾವಿರ ಹಾಗೂ ಪದವಿಪೂರ್ವ ಕಾಲೇಜಿಗೆ ₹ 25 ಸಾವಿರವನ್ನುಎನ್.ಜಿ.ಕೊಟ್ಯಾಳ ದೇಣಿಗೆ ನೀಡಿದರು. ಈ ಹಣದಲ್ಲಿ ಪ್ರತಿ ವರ್ಷ ಬರುವ ಬಡ್ಡಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಎಂದರು.

ಕೊಟ್ಯಾಳ ಗುರುಗಳ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿ ಮಲ್ಲಿನಾಥ ಕುಸನಾಳ ₹ 1 ಲಕ್ಷ ಹಣ ಠೇವಣಿ ಇಟ್ಟು, ಬರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತೆ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದಶಿಕ್ಷಕ ಎನ್.ಜಿ.ಕೊಟ್ಯಾಳ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳುಂವತೆ ಮಾಡಿದ ಸಂತೃಪ್ತಿ ನನಗಿದೆ. ಈ ಬಿಳ್ಕೊಡುಗೆ ಜೀವನದಲ್ಲೆ ಮರೆಯಲು ಸಾಧ್ಯವಿಲ್ಲ ಎಂದರು.

ವಿರಕ್ತ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶಿಕ್ಷಕರೆಂದರೆ ಇವರಂತಿರಬೇಕು, ಇವರು ಮಾಡಿದ ನಿಸ್ವಾರ್ಥ ಸೇವೆ ನೆರೆದ ಗ್ರಾಮಸ್ಥರ ಪ್ರೀತಿಯಲ್ಲಿ ಕಾಣುತ್ತಿದೆ ಎಂದರು.

ಬಿಜ್ಜರಗಿಗ್ರಾ.ಪಂ. ಅಧ್ಯಕ್ಷಸುಭಾಸಗೌಡ ಪಾಟೀಲ್ ಮಾತನಾಡಿ, ಇಂತಹ ಶಿಕ್ಷಕರು ದೊರೆತಿದ್ದು ಅಪರೂಪ, ಇವರನ್ನು ಪಡೆಯಲು ನಾವು ಪೂರ್ವಜನ್ಮದ ಪುಣ್ಯ ಮಾಡಿದ್ದೇವೆ ಎಂದೆನಿಸುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಬಸವರಾಜ ಬಿಜ್ಜರಗಿ, ರಾಮಲಿಂಗ ಲೋಣಿ, ಆರ್.ಎಂ.ಮಸಳಿ, ಎಂ.ಬಿ.ಕುಸನಾಳ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ.ದೆಯಗೊಂಡ, ರಾಜಕುಮಾರ ಮಸಳಿ, ಬಂದೇನವಾಜ ಬೇವನೂರ, ಆರ್.ಬಿ‌.ಬಿರಾದಾರ, ಎಸ್.ಬಿ.ಬಿರಾದಾರ, ಎಸ್.ಆರ್.ಹಿರೇಮಠ, ಎಂ.ಎ.ಬಿರಾದಾರ, ರಾಜು ಡೆಂಗನವರ, ಅಮರೇಶ ಬಿರಾದಾರ, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.