ADVERTISEMENT

ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಕಪ್ಪು ಬಟ್ಟೆ ಪ್ರದರ್ಶನ

ಶಾಸಕ ಬೆಲ್ಲದ, ಟೆಂಗಿನಕಾಯಿ ಸೇರಿ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 9:03 IST
Last Updated 13 ಅಕ್ಟೋಬರ್ 2024, 9:03 IST
   

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಹಾಗೂ ಶಾಸಕ ವಿನಯ ಕುಲಕರ್ಣಿ ವಿರುದ್ಧದ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ಗೋಕುಲ ರಸ್ತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನ ತಡೆದು ಮುತ್ತಿಗೆ ಹಾಕಲು ಯತ್ನಿಸಿದರು.

ಪೊಲೀಸ್‌ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಹಳೇ ಸಿಎಆರ್‌ ಮೈದಾನಕ್ಕೆ ಕರೆತಂದು, ನಂತರ ಬಿಡುಗಡೆ ಮಾಡಿದರು.

ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಸವದತ್ತಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಕ್ಷಯ ಪಾರ್ಕ್‌ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರಾದ ಜಗದೀಶ ಕಂಬಳಿ ಮತ್ತು ಮಂಜುನಾಥ ಕಲಾಲ ಕಪ್ಪು ಬಟ್ಟೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಗೋಕುಲ ರಸ್ತೆ ಮಾರ್ಗದ ಇಕ್ಕೆಲಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಪೊಲೀಸ್‌ ಬಿಗಿ ಭದ್ರತೆಯ ನಡುವೆಯೇ ಕಾರ್ಯಕರ್ತರು ಕಪ್ಪುಬಟ್ಟೆ ಪ್ರದರ್ಶಿಸಿದರು.

ADVERTISEMENT

ಧರಣಿ, ಪ್ರತಿಭಟನೆ: ಶಾಸಕರಾದ ಅರವಿಂದ ಬೆಲ್ಲದ ಮತ್ತು ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಅಕ್ಷಯ ಪಾರ್ಕ್‌ ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಧರಣಿ ನಡೆಸಿದರು. ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ದೇಶದ್ರೋಹ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಹಿಂಪಡೆಯುವ ನಿರ್ಧಾರದ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪ್ರಕರಣ ಹಿಂಪಡೆಯಬಾರದು’ ಒತ್ತಾಯಿಸಿದರು. ಸರ್ಕಾರ ಹಾಗೂ  ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಲಭೆ ಪ್ರಕರಣ ಹಿಂಪಡೆಯದಂತೆ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಬಿಜೆಪಿ ಮುಖಂಡರು ನಿರ್ಧರಿಸಿದ್ದರು. ಪೊಲೀಸರು ಅನುಮತಿ ನೀಡದ ಕಾರಣ ಸಿಎಂ ಕಾರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಮುಖಂಡರಾದ ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದ ಮಠ, ಮೋಹನ ಹಿರೇಮನಿ, ರವಿ ನಾಯಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.