ಬೆಳಗಾವಿ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರು ಇಲ್ಲಿನ ಹಿಂಡಲಗಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾದರು.
ಅವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ರಾಖಿ ಕಟ್ಟಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಂಡರು. ಬೆಂಬಲಿಗರು ಹೂಮಾಲೆಗಳನ್ನು ಹಾಕಿ ಸ್ವಾಗತಿಸಿಕೊಂಡರು. ಆವರಣದಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರ ಜಯಘೋಷಗಳು ಮುಗಿಲು ಮುಟ್ಟಿವೆ.
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು.
ರೈತ ಕುಟುಂಬದಲ್ಲಿ ಜನಿಸಿ, ವಿದ್ಯಾರ್ಥಿ ನಾಯಕನಾಗಿ ಈ ಮಟ್ಟಕ್ಕೆ ಬಂದಿದ್ದೇನೆ. ನನ್ನ ಜನರಿಗಾಗಿ ಎಂಥದ್ದೇ ಹೋರಾಟಕ್ಕೆ ಸಿದ್ಧವಾಗಿದ್ದೇನೆ. ಕಾನೂನುಗಳಿಗೆ ಬೆಲೆ ಕೊಟ್ಟು ಇದ್ದೆ. ಜೀವನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಓದುತ್ತಿರಲಿಲ್ಲ, ಜೈಲಿಗೆ ಬಂದ ನಂತರ ಓದುವುದನ್ನು ಕಲಿತೆ. ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇನೆ.ಎಲ್ಲ ಸಮಾಜದವರ ಪರವಾಗಿ ಕೆಲಸ ಮಾಡಿದ್ದೇನೆ ಎಂದು ವಿನಯ ಕುಲಕರ್ಣಿ ಹೇಳಿದರು.
ಇದನ್ನೂ ಓದಿ:ಬಿಜೆಪಿ ಕದ ತಟ್ಟುತ್ತಿರುವ ವಿನಯ್ ಕುಲಕರ್ಣಿ
ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸುತ್ತಿದ್ದಾರೆ. ಕೋವಿಡ್ ಭೀತಿಯ ನಡುವೆಯೂ ಅಂತರವನ್ನೂ ಮರೆತು ತಮ್ಮ ನಾಯಕನನ್ನು ಬರಮಾಡಿಕೊಂಡ ಬೆಂಬಲಿಗರು.
ಜೈಲಿನ ಹೊರಗೆ ಅಭಿಮಾನಿಗಳ ದಂಡು
ಬೆಳಗಾವಿ:ವಿನಯ ಕುಲಕರ್ಣಿ ಅವರನ್ನು ಬರಮಾಡಿಕೊಳ್ಳಲು ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಬಳಿ ಬೆಂಬಲಿಗರು ಮತ್ತು ಅಭಿಮಾನಿಗಳು ಜಮಾಯಿಸಿತ್ತು.
ಮುಂಜಾಗ್ರತಾ ಕ್ರಮವಾಗಿ ಕಾರಾಗೃಹದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಭಿಮಾನಿಗಳು ಸೇಬು, ಹೂವಿನ ಹಾರಗಳೊಂದಿಗೆ ಬಂದಿದ್ದರು. ವಿನಯ ಕುಲಕರ್ಣಿ ಅವರು ಹೊರಬರುತ್ತಲೇ ಅವುಗಳನ್ನು ಅವರಿಗೆ ಅರ್ಪಿಸಿ ಆನಂದಿಸಿದರು.
ವಿನಯ ನ.9ರಿಂದ ಹಿಂಡಲಗಾ ಕಾರಾಗೃಹದಲ್ಲಿದ್ದಾರೆ. ಆ.11ರಂದು ಸುಪ್ರೀಂ ಕೋರ್ಟ್ ಹಾಗೂ ಆ.19ರಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹೀಗಾಗಿ, ಅಭಿಮಾನಿಗಳುಅದ್ಧೂರಿಯಾಗಿ ಸ್ವಾಗತ ಕೋರಿದರು.
ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೂಡ ತಮ್ಮ ಬೆಂಬಲಿಗರೊಂದಿಗೆ ಬಂದಿದ್ದರು. ವಿನಯ ಅವರು ಜೈಲಿನಿಂದ ಹೊರ ಬರುತ್ತಲೇ ಅವರಿಗೆ ರಾಖಿ ಕಟ್ಟಿ ಸ್ವಾಗತಿಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮಿ, ‘ನನ್ನ ಕುಟುಂಬದ ಹಾಗೂ ವಿನಯಣ್ಣನ ಕುಟುಂಬದ ನಡುವಿನದ್ದು ರಾಜಕೀಯೇತರ ಸಂಬಂಧ. 25 ವರ್ಷಗಳಿಂದಲೂ ನಂಟಿದೆ. ಅವರಿಗೆ ಸಂಕಷ್ಟ ಎದುರಾಯಿತೆಂದು ನಾವೂ ಮರುಗಿದ್ದೆವು. ರಕ್ಷಾಬಂಧನ ಸಮೀಪದಲ್ಲಿರುವಾಗಲೇ ಅವರು ಕಾರಾಗೃಹದಿಂದ ಬಿಡುಗಡೆ ಆಗುತ್ತಿದ್ದಾರೆ. ಇದರಿಂದ ತುಂಬಾ ಸಂತೋಷವಾಗಿದೆ. ಅಣ್ಣನನ್ನು ಬರಮಾಡಿಕೊಳ್ಳಲು ತಂಗಿಯಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ತಿಳಿಸಿದರು.
‘ಅವರ ಜೀವನದಲ್ಲಿ ಇತ್ತೀಚೆಗೆ ನಡೆದ ಕಹಿ ಘಟನೆಗಳು ಅವರನ್ನು ಹಾಗೂ ಕುಟುಂಬದವರನ್ನು ಬಹಳ ಘಾಸಿಗೊಳಿಸಿವೆ. ಕೆಟ್ಟ ಪರಿಸ್ಥಿತಿಯಲ್ಲಿ ಅವರು ತೊಂದರೆ ಅನುಭವಿಸಿದ್ದಾರೆ. ಅವರು ಪ್ರಕರಣದಲ್ಲಿ ಗೆದ್ದುಬರಲಿ ಎಂದು ಹಾರೈಸುತ್ತೇನೆ. ಪಕ್ಷವು ಖಂಡಿತವಾಗಿಯೂ ವಿನಯ ಅವರ ಜೊತೆಗೆ ಇರುತ್ತದೆ. ಅವರೊಬ್ಬ ರಾಜ್ಯ ಮಟ್ಟದ ಮತ್ತು ದೊಡ್ಡ ಸಮಾಜದ ಪ್ರಮುಖ ನಾಯಕ. ಅವರು ಬಿಡುಗಡೆ ಆಗುತ್ತಿರುವುದರಿಂದ ಪಕ್ಷಕ್ಕೂ ಬಹಳಷ್ಟು ಅನುಕೂಲ ಆಗಲಿದೆ ಮತ್ತು ಶಕ್ತಿ ವೃದ್ಧಿಸಲಿದೆ. ಅವರು ಕ್ಷೇತ್ರ ಅಥವಾ ಜಿಲ್ಲೆಗೆ ಸೀಮಿತವಾದ ನಾಯಕರಲ್ಲ. ಉತ್ತರ ಕರ್ನಾಟಕದ ಪ್ರಭಾವಿಯೂ ಆಗಿದ್ದಾರೆ’ ಎಂದರು.
‘ಅವರು ನನಗೆ ರಾಜಕೀಯವಾಗಿ ಬಹಳಷ್ಟು ಮಾರ್ಗದರ್ಶನ ನೀಡಿದ್ದಾರೆ. ನಾನು ಸಂಕಷ್ಟದಲ್ಲಿದ್ದಾಗ ಧೈರ್ಯ ತುಂಬಿದ್ದಾರೆ. ಅವರು ಬಿಡುಗಡೆ ಆಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸಂತೋಷದಿಂದ ಇಲ್ಲಿಗೆ ಬಂದಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.