ಬೆಂಗಳೂರು: ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ವಿನಯ್ ಕುಲಕರ್ಣಿ ಜೈಲಿಂದ ಬಿಡುಗಡೆಯಾದ ಸಂದರ್ಭ ಕಾಂಗ್ರೆಸ್ ನಾಯಕರು ಸ್ವಾಗತಿಸಿದ ಬಗೆಯನ್ನು ಬಿಜೆಪಿ ಟೀಕಿಸಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿನಯ್ ಕುಲಕರ್ಣಿ ಅವರಿಗೆ ಸಿಹಿ ತಿನ್ನಿಸಿ ಬರಮಾಡಿಕೊಂಡಿರುವುದು ಕಾಂಗ್ರೆಸ್ ಪಕ್ಷವು ನೈತಿಕವಾಗಿ ಅಧಃಪತನ ಕಂಡಿದೆ ಎಂಬುದನ್ನು ಸೂಚಿಸುತ್ತದೆ ಎಂದು ಬಿಜೆಪಿ ಟೀಕಿಸಿದೆ.
'ಕಾಂಗ್ರೆಸ್ ಪಕ್ಷ ನೈತಿಕವಾಗಿ ಅಧಃಪತನ ಕಂಡಿದೆ ಎಂಬುದನ್ನು ಸೂಚಿಸಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೊಲೆ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದರೆ ಯುದ್ಧ ಗೆದ್ದು ಬಂದವರಂತೆ ಸ್ವಾಗತಿಸಲಾಗುತ್ತಿದೆ. ಕೊಲೆ ಆರೋಪಿಗಳಿಗೆ ಭವ್ಯ ಸ್ವಾಗತ ನೀಡುವುದನ್ನು ಕಾಂಗ್ರೆಸ್ ವರಿಷ್ಠರು ಬೆಂಬಲಿಸುತ್ತಾರೆಯೇ?' ಎಂದು ಬಿಜೆಪಿ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.
'ವಿವಾದಾತ್ಮಕತೆಯೇ ನಾಯಕತ್ವದ ಗುಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಬೆನ್ನು ತಟ್ಟಿಕೊಂಡ ಮೇಲೆ ವಿನಯ್ ಕುಲಕರ್ಣಿ ಅವರಂಥ ಕೊಲೆ ಆರೋಪಿಗೆ ಭವ್ಯ ಸ್ವಾಗತ ಸಿಗುವುದರಲ್ಲಿ ಹೆಚ್ಚುಗಾರಿಕೆ ಇಲ್ಲ. ತಿಹಾರ್, ಹಿಂಡಲಗಾ ಜೈಲಿನಿಂದ ಹೊರಬಂದವರೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಷ್ಠರು!' ಎಂದು ಟ್ವೀಟ್‌ನಲ್ಲಿ ಬಿಜೆಪಿ ವ್ಯಂಗ್ಯ ಮಾಡಿದೆ.
ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಶನಿವಾರ ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾದರು. ಅವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ರಾಖಿ ಕಟ್ಟಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಂಡರು. ಬೆಂಬಲಿಗರು ಹೂಮಾಲೆಗಳನ್ನು ಹಾಕಿ ಸ್ವಾಗತಿಸಿದರು. ಆವರಣದಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರ ಜಯಘೋಷಗಳು ಮುಗಿಲು ಮುಟ್ಟಿತ್ತು.
ಕೇಂದ್ರ ಸಚಿವ ಭಗವಂತ ಖೂಬಾ ಅವರು ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದಾಗ ಅಭಿಮಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತಿಸಿದ್ದರು. ಇದು ತಾಲಿಬಾನ್ ಸಂಸ್ಕೃತಿ ಎಂದು ಪ್ರತಿಪಕ್ಷದ ಕೆಲವು ನಾಯಕರು ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.