ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

‘ಕೈ’ ಸರ್ಕಾರದ ಜಾಹೀರಾತು: ಸಂಸದ ತುಕಾರಾಮ್‌ ಅನರ್ಹತೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 13:13 IST
Last Updated 22 ಅಕ್ಟೋಬರ್ 2024, 13:13 IST
<div class="paragraphs"><p>ಆಯೋಗಕ್ಕೆ ದೂರು ಸಲ್ಲಿಸಿ ಆರ್.ಅಶೋಕ, ಪಿ.ರಾಜೀವ್‌, ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಮತ್ತಿತರ ನಾಯಕರು ಹೊರಬಂದರು</p></div>

ಆಯೋಗಕ್ಕೆ ದೂರು ಸಲ್ಲಿಸಿ ಆರ್.ಅಶೋಕ, ಪಿ.ರಾಜೀವ್‌, ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಮತ್ತಿತರ ನಾಯಕರು ಹೊರಬಂದರು

   

ನವದೆಹಲಿ: ವಿಧಾನಸಭಾ ಉಪಚುನಾವಣೆಯ ವೇಳಾಪಟ್ಟಿ ಪ್ರಕಟವಾದ ಬಳಿಕ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳನ್ನು ನೀಡಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಮಾದರಿ ನೀತಿಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕದ ನಿಯೋಗವು ಭಾರತೀಯ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ. 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಮತ್ತಿತರರನ್ನು ಒಳಗೊಂಡ ನಿಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿತು. 

ADVERTISEMENT

‘ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆ ಬಳಿಕ ಸರ್ಕಾರವು ಕನ್ನಡ ಹಾಗೂ ಇಂಗ್ಲಿಷ್‌ ಪತ್ರಿಕೆಗಳಿಗೆ ಪೂರ್ಣ ಪುಟದ ಜಾಹೀರಾತು ನೀಡಿದೆ. ವಿಧಾನಸಭಾ ಚುನಾವಣೆ ನಡೆಯುವ ಮಹಾರಾಷ್ಟ್ರದ ಪತ್ರಿಕೆಗಳಲ್ಲೂ ಜಾಹೀರಾತು ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿ ಈ ಜಾಹೀರಾತು ನೀಡಲಾಗಿದೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರವು ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿದೆ’ ಎಂದು ಬಿಜೆಪಿ ದೂರಿತು. 

ಕರ್ನಾಟಕ ಸರ್ಕಾರದ ‘ಗ್ಯಾರಂಟಿ’ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳನ್ನು ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ನೀಡಲಾ
ಗಿತ್ತು. ಆಗ ಚುನಾವಣಾ ಆಯೋಗವು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು’ ಎಂದು ಬಿಜೆಪಿ ಹೇಳಿತು. 

ಸಾರ್ವಜನಿಕರ ತೆರಿಗೆ ಹಣದಲ್ಲಿ ಜಾಹೀರಾತುಗಳನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೀತಿಸಂಹಿತೆ ಉಲ್ಲಂಘಿಸಿದ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ನಿಯೋಗವು ಒತ್ತಾಯಿಸಿತು. 

ತುಕಾರಾಮ್‌ ಅನರ್ಹತೆಗೆ ಒತ್ತಾಯ: ಬಳ್ಳಾರಿಯ ಸಂಸದ ಇ.ತುಕಾರಾಮ್ ಅವರು ಎಲ್ಲ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ನಿಯೋಗ ಆಗ್ರಹಿಸಿತು. 

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ಸಾಕಷ್ಟು ಬಾರಿ ಚರ್ಚೆಗಳಾಗಿವೆ. ವಾಲ್ಮೀಕಿ ನಿಗಮದ ₹187 ಕೋಟಿ ಹಣವನ್ನು ಕಾಂಗ್ರೆಸ್‌ ಸರ್ಕಾರ ಲೂಟಿ ಮಾಡಿದೆ. ಈ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೂ ಬಳಸಲಾಗಿದೆ. ಮತದಾರರಿಗೆ ಆಮಿಷ ಒಡ್ಡಿ ಗೆಲುವು ಸಾಧಿಸಿರುವ ತುಕಾರಾಮ್ ಅವರನ್ನು ಅನರ್ಹಗೊಳಿಸಬೇಕು’ ಎಂದು ಒತ್ತಾಯಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.